ಏಶ್ಯ ಕಪ್ ಗೆದ್ದ ಭಾರತ ತಂಡಕ್ಕೆ 21 ಕೋಟಿ ರೂ. ಬಹುಮಾನ ಘೋಷಿಸಿದ ಬಿಸಿಸಿಐ
Photo credit: PTI
ಹೊಸದಿಲ್ಲಿ: ಈ ಬಾರಿಯ ಏಶ್ಯ ಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿ, ಅಜೇಯವಾಗಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಭಾರತ ಕ್ರಿಕೆಟ್ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 21 ಕೋಟಿ ರೂ. ಬಹುಮಾನ ಘೋಷಿಸಿದೆ.
ರವಿವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 5 ವಿಕೆಟ್ ಗಳಿಂದ ಪರಾಭವಗೊಳಿಸುವ ಮೂಲಕ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಸಿಸಿಐ, “ಇದೊಂದು ಅಸಾಧಾರಣ ಗೆಲುವಾಗಿದೆ. ಇದರ ಸಂಭ್ರಮಾಚರಣೆಯ ಭಾಗವಾಗಿ ಭಾರತ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳಿಗೆ 21 ಕೋಟಿ ರೂ. ನಗದು ಬಹುಮಾನ ಘೋಷಿಸಲಾಗಿದೆ” ಎಂದು ಪ್ರಕಟಿಸಿದೆ.
“ಮೂರು ಹೊಡೆತಗಳು, ಶೂನ್ಯ ಪ್ರತಿಕ್ರಿಯೆ. ಏಶ್ಯ ಕಪ್ ಚಾಂಪಿಯನ್ಸ್. ಸಂದೇಶ ರವಾನಿಸಲಾಗಿದೆ” ಎಂದು ಪರೋಕ್ಷವಾಗಿ ಛೇಡಿಸಿದೆ.
“ಪಾಕಿಸ್ತಾನದ ವಿರುದ್ಧ 3-0 ಅಂತರದ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಅಭಿನಂದನೆಗಳು. ಒತ್ತಡದ ನಡುವೆಯೂ ತಿಲಕ್ ವರ್ಮ ಹಾಗೂ ಕುಲದೀಪ್ ಯಾದವ್ ಅದ್ಭುತ ಪ್ರದರ್ಶನ ನೀಡಿದ್ದಾರೆ” ಎಂದು ಬಿಸಿಸಿಐನ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರಶಂಸಿಸಿದ್ದಾರೆ.
ಈ ಬಾರಿಯ ಏಶ್ಯ ಕಪ್ ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ, ತಾನಾಡಿದ ಎಲ್ಲ ಪಂದ್ಯಗಳಲ್ಲೂ ಗೆಲುವು ಸಾಧಿಸುವ ಮೂಲಕ, ಅಜೇಯ ದಾಖಲೆಯೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.