ಏಶ್ಯ ಕಪ್: ಭಾರತಕ್ಕೆ ಸುಲಭ ಜಯ
ಕುಲದೀಪ್, ಶಿವಂ ದಾಳಿಗೆ ತತ್ತರಿಸಿದ ಯುಎಇ ತಂಡ
ದುಬೈ, ಸೆ.10: ಕುಲದೀಪ್ ಯಾದವ್(4-7) ಹಾಗೂ ಶಿವಂ ದುಬೆ(3-4) ಅವರ ಕರಾರುವಾಕ್ ಬೌಲಿಂಗ್ ದಾಳಿಗೆ ತತ್ತರಿಸಿದ ಆತಿಥೇಯ ಯುಎಇ ತಂಡ ಏಶ್ಯ ಕಪ್ ಟಿ-20 ಟೂರ್ನಿಯ ‘ಎ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಭಾರತ ತಂಡದ ವಿರುದ್ಧ 13.1 ಓವರ್ ಗಳಲ್ಲಿ ಕೇವಲ 57 ರನ್‌ಗೆ ಸರ್ವಪತನವಾಗಿದೆ.
ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 58 ರನ್ ಗುರಿ ಪಡೆದ ಭಾರತ ತಂಡವು 4.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ 9 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತು.
ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ(30 ರನ್, 16 ಎಸೆತ, 2 ಬೌಂಡರಿ, 3 ಸಿಕ್ಸರ್)ಹಾಗೂ ಶುಭಮನ್ ಗಿಲ್(ಔಟಾಗದೆ 20, 9 ಎಸೆತ, 2 ಬೌಂಡರಿ, 1 ಸಿಕ್ಸರ್)ಭಾರತಕ್ಕೆ ಇನ್ನೂ 93 ಎಸೆತಗಳು ಬಾಕಿ ಇರುವಾಗಲೇ ಸುಲಭ ಗೆಲುವು ತಂದುಕೊಟ್ಟರು. ಗೆಲುವಿಗೆ 11 ರನ್ ಅಗತ್ಯವಿದ್ದಾಗ ಅಭಿಷೇಕ್ ಅವರು ಜುನೈದ್ ಸಿದ್ದೀಕ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಸೂರ್ಯಕುಮಾರ್ ಔಟಾಗದೆ 7 ರನ್ ಗಳಿಸಿದರು.
ಇದಕ್ಕೂ ಮೊದಲು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 16 ಪಂದ್ಯಗಳ ನಂತರ ಮೊದಲ ಬಾರಿ ಟಾಸ್ ಜಯಿಸಿದ ಭಾರತ ತಂಡವು ಮೊದಲು ಬೌಲಿಂಗ್ ಆಯ್ದಕೊಂಡಿತು.
ಯುಎಇ ಇನಿಂಗ್ಸ್ ನಲ್ಲಿ ಆರಂಭಿಕ ಬ್ಯಾಟರ್‌ಗಳಾದ ಅಲಿಶನ್ ಶರಫು (22 ರನ್, 17 ಎಸೆತ)ಹಾಗೂ ಮುಹಮ್ಮದ್ ವಸೀಂ(19 ರನ್, 22 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ಉಳಿದವರು ಒಂದಂಕಿ ಗಳಿಸಿ ಔಟಾದರು.
ಅಲಿಶನ್ ವಿಕೆಟನ್ನು ಉರುಳಿಸಿದ ಜಸ್‌ಪ್ರಿತ್ ಬುಮ್ರಾ ಯುಎಇ ತಂಡದ ವಿಕೆಟ್ ಪತನಕ್ಕೆ ನಾಂದಿ ಹಾಡಿದರು. 7 ವಿಕೆಟ್‌ಗಳನ್ನು ಹಂಚಿಕೊಂಡ ಎಡಗೈ ಸ್ಪಿನ್ನರ್ ಕುಲದೀಪ್ ಹಾಗೂ ವೇಗದ ಬೌಲರ್ ಶಿವಂ ದುಬೆ, ಯುಎಇ ಬ್ಯಾಟರ್‌ಗಳಿಗೆ ಸಿಂಹಸ್ವಪ್ನರಾದರು. ಬುಮ್ರಾ, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಗಳನ್ನು ಪಡೆದರು.
ಶುಭಮನ್ ಗಿಲ್ ಅಗ್ರ ಸರದಿಗೆ ವಾಪಸಾಗಿದ್ದರೂ ಸಂಜು ಸ್ಯಾಮ್ಸನ್ ರನ್ನು ವಿಕೆಟ್‌ಕೀಪರ್ ಆಗಿ ಉಳಿಸಿಕೊಂಡ ಭಾರತವು ಆಡುವ 11ರ ಬಳಗದಲ್ಲಿ ಅಚ್ಚರಿಯ ಹೆಜ್ಜೆ ಇಟ್ಟಿತು. ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಹಾಗೂ ಕುಲದೀಪ್ ಯಾದವ್ ರನ್ನು ಆಯ್ಕೆ ಮಾಡಿತು.
2ನೇ ಪ್ರಮುಖ ಬೌಲರ್ ಆಗಿ ಅರ್ಷದೀಪ್ ಸಿಂಗ್ ಇಲ್ಲವೇ ಹರ್ಷಿತ್ ರಾಣಾರನ್ನು ಆಯ್ಕೆ ಮಾಡುವ ಬದಲು ಆಲ್‌ರೌಂಡರ್ ಶಿವಂ ದುಬೆಗೆ ಅವಕಾಶ ನೀಡಿದೆ. ಜಸ್‌ಪ್ರಿತ್ ಬುಮ್ರಾ ಏಕೈಕ ಸ್ಪೆಷಲಿಸ್ಟ್ ಬೌಲರ್ ಆಗಿದ್ದು, ಹೊಸ ಚೆಂಡಿನಲ್ಲಿ ಹಾರ್ದಿಕ್ ಪಾಂಡ್ಯ ನೆರವಾಗಿದ್ದಾರೆ.