×
Ad

ಏಶ್ಯ ಕಪ್ |ನಾಳೆ ಭಾರತ-ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿ

Update: 2025-09-20 22:16 IST

PC : X

ದುಬೈ, ಸೆ.20: ಗ್ರೂಪ್ ಹಂತದಲ್ಲಿ ಆಡಿರುವ ಎಲ್ಲ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ ಕ್ರಿಕೆಟ್ ತಂಡ ರವಿವಾರ ನಡೆಯಲಿರುವ ಏಶ್ಯ ಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮತ್ತೊಮ್ಮೆ ಮುಖಾಮುಖಿಯಾಗಲಿದೆೆ.

ಈ ಎರಡು ತಂಡಗಳು ಸೆ.14ರಂದು ದುಬೈನಲ್ಲಿ ಗ್ರೂಪ್ ಹಂತದ ಪಂದ್ಯವನ್ನು ಆಡಿದ್ದು, ಆ ಪಂದ್ಯವನ್ನು ಭಾರತವು ಸುಲಭವಾಗಿ ಗೆದ್ದುಕೊಂಡಿತ್ತು.

ಗ್ರೂಪ್ ಹಂತದಲ್ಲಿ 12 ಪಂದ್ಯಗಳು ನಡೆದ ನಂತರ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಸೂಪರ್-4 ಹಂತ ತಲುಪಿವೆ. ಮುಂದಿನ 6 ದಿನಗಳ ಕಾಲ ಈ ತಂಡಗಳು ಪರಸ್ಪರ ಒಂದು ಬಾರಿ ಸೆಣಸಾಡಲಿವೆ. ಹೆಚ್ಚು ಅಂಕ ಗಳಿಸುವ ತಂಡವು ಸೆ.28ರಂದು ರವಿವಾರ ನಡೆಯಲಿರುವ ಫೈನಲ್‌ಗೆ ಅರ್ಹತೆ ಪಡೆಯಲಿದೆ.

ಭಾರತ ತಂಡವು ಒಮಾನ್ ವಿರುದ್ಧ ಶುಕ್ರವಾರ ಆಡಿದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪರದಾಟ ನಡೆಸಿದರೂ 21 ರನ್ ಅಂತರದಿಂದ ಜಯ ಸಾಧಿಸಿದೆ. ಮತ್ತೊಂದೆಡೆ ಶ್ರೀಲಂಕಾ ತಂಡ ಕೂಡ ಹಾಂಕಾಂಗ್ ವಿರುದ್ಧ ತಿಣುಕಾಡಿತ್ತು.

ಒಮಾನ್ ವಿರುದ್ದ ಪಂದ್ಯದಲ್ಲಿ ಭಾರತವು ಸಾಕಷ್ಟು ಪ್ರಯೋಗ ನಡೆಸಿದ್ದು, ನಾಯಕ ಸೂರ್ಯಕುಮಾರ್ 8ನೇ ವಿಕೆಟ್ ಪತನಗೊಂಡರೂ ಬ್ಯಾಟಿಂಗ್‌ಗೆ ಇಳಿಯಲಿಲ್ಲ. ಸೂರ್ಯಕುಮಾರ್ ಭಾರತ ತಂಡವನ್ನು ದಿಟ್ಟವಾಗಿ ಮುನ್ನಡೆಸುತ್ತಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿದೆ.

ಭಾರತ ವಿರುದ್ದ ಪಂದ್ಯದ ವೇಳೆ ಹ್ಯಾಂಡ್‌ಶೇಕ್ ವಿವಾದ ಉಂಟಾದ ನಂತರ ಪಾಕಿಸ್ತಾನ ತಂಡವು ಪಂದ್ಯಾವಳಿಯಿಂದ ಹೊರಗುಳಿಯುವ ಬೆದರಿಕೆ ಹಾಕಿತ್ತು. ಯುಎಇ ವಿರುದ್ಧ ಪಂದ್ಯದಲ್ಲಿ ಸಮಯಕ್ಕೆ ಸರಿಯಾಗಿ ಮೈದಾನಕ್ಕೆ ಆಗಮಿಸದೆ ಹೊಟೇಲ್ ರೂಮ್‌ನಲ್ಲಿ ಉಳಿದುಕೊಂಡಿತ್ತು. ಆ ಪಂದ್ಯವು 1 ಗಂಟೆ ತಡವಾಗಿ ಆರಂಭವಾಗಿತ್ತು.

ಭಾರತ-ಪಾಕಿಸ್ತಾನ ನಡುವಿನ ಸೂಪರ್-4 ಪಂದ್ಯದಲ್ಲಿ ಮತ್ತಷ್ಟು ಡ್ರಾಮಾ ನಡೆಯುವ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಪಂದ್ಯ ಮುಗಿದ ನಂತರ ಪಾಕಿಸ್ತಾನಿ ಆಟಗಾರರ ಕೈ ಕುಲುಕಲು ನಿರಾಕರಿಸಿದ್ದರು. ಇದೀಗ ಪಾಕಿಸ್ತಾನ ತಂಡ ಭಾರತಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.

ಪಾಕಿಸ್ತಾನ ತಂಡ ಗ್ರೂಪ್ ಹಂತದಲ್ಲಿ ಯುಎಇ ಹಾಗೂ ಒಮಾನ್ ವಿರುದ್ಧ ಜಯ ಸಾಧಿಸಿ ಒಟ್ಟು 4 ಅಂಕದೊಂದಿಗೆ ಸೂಪರ್-4 ಹಂತಕ್ಕೇರಿದೆ. ಭಾರತವು ಎಲ್ಲ ಮೂರೂ ಪಂದ್ಯಗಳನ್ನು ಜಯಿಸಿ ಆರಂಕವನ್ನು ಗಳಿಸಿದೆ.

ಹೆಡ್-ಟು-ಹೆಡ್ ದಾಖಲೆ

ಟಿ-20 ಕ್ರಿಕೆಟ್‌ನಲ್ಲಿ ಹೆಡ್-ಟು-ಹೆಡ್ ದಾಖಲೆಯಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ.

ಹಿಂದಿನ 14 ಟಿ-20 ಪಂದ್ಯಗಳಲ್ಲಿ ಭಾರತ ತಂಡವು ಪಾಕಿಸ್ತಾನ ತಂಡದ ವಿರುದ್ಧ 10 ಪಂದ್ಯಗಳಲ್ಲಿ ಜಯ ಸಾಧಿಸಿ ಪ್ರಾಬಲ್ಯ ಮೆರೆದಿದೆ. 3 ಪಂದ್ಯದಲ್ಲಿ ಪಾಕಿಸ್ತಾನ ಜಯ ಸಾಧಿಸಿದ್ದು, ಡರ್ಬನ್‌ನಲ್ಲಿ 2007ರಲ್ಲಿ ನಡೆದಿದ್ದ ಟಿ-20 ವಿಶ್ವಕಪ್‌ನಲ್ಲಿ ನಡೆದಿದ್ದ ಒಂದು ಪಂದ್ಯ ಟೈ ಆಗಿತ್ತು.

ಭಾರತವು 2012ರಲ್ಲಿ ಅಹ್ಮದಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ದ ಟಿ-20 ಪಂದ್ಯದಲ್ಲಿ ಗರಿಷ್ಠ ಸ್ಕೋರ್(192/5)ಕಲೆ ಹಾಕಿ 11 ರನ್‌ನಿಂದ ಜಯ ಸಾಧಿಸಿತ್ತು. ಪಾಕಿಸ್ತಾನ ತಂಡವು 2022ರಲ್ಲಿ ದುಬೈನಲ್ಲಿ ಭಾರತ ತಂಡದ ವಿರುದ್ಧ 5 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿ 5 ವಿಕೆಟ್‌ನಿಂದ ಗೆಲುವು ಪಡೆದಿತ್ತು.

ಪಾಕಿಸ್ತಾನ ತಂಡವು 2016ರಲ್ಲಿ ಮೀರ್ಪುರದಲ್ಲಿ ಭಾರತದ ವಿರುದ್ದ 83 ರನ್‌ಗೆ ಆಲೌಟಾಗಿ ಕನಿಷ್ಠ ಸ್ಕೋರ್ ಗಳಿಸಿತ್ತು. ಭಾರತ ತಂಡವು 2024ರಲ್ಲಿ ನ್ಯೂಯಾರ್ಕ್ ನಡೆದಿದ್ದ ಟಿ-20 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 119 ರನ್‌ಗೆ ಆಲೌಟಾಗಿ ಕಡಿಮೆ ರನ್ ಗಳಿಸಿತು. ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗೆ 113 ರನ್‌ಗೆ ನಿಯಂತ್ರಿಸಿದ್ದ ಭಾರತ ತಂಡವು 6 ರನ್‌ನಿಂದ ರೋಚಕ ಗೆಲುವು ಪಡೆದಿತ್ತು.

ಪಂದ್ಯ ಆರಂಭದ ಸಮಯ: ರಾತ್ರಿ 8:00

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News