ಹಸ್ತಲಾಘವ ವಿವಾದ | ಏಶ್ಯ ಕಪ್ ನ ಯುಎಇ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ ಪಾಕಿಸ್ತಾನ: ವರದಿ
PC : X
ದುಬೈ: ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಭಾಗಿಯಾಗಿದ್ದ ಹಸ್ತಲಾಘವ ವಿವಾದದ ಬೆನ್ನಿಗೇ, ಏಶ್ಯ ಕಪ್ ನಲ್ಲಿನ ಯುಎಇ ವಿರುದ್ಧದ ಅಂತಿಮ ಗುಂಪು ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು Geo News ವರದಿ ಮಾಡಿದೆ.
ಆದರೆ, ಪಾಕಿಸ್ತಾನ ತಂಡದೊಂದಿಗೆ ಸಂಧಾನ ಮಾತುಕತೆಗಳು ಮುಂದುವರಿದಿರುವುದರಿಂದ, ಪಾಕಿಸ್ತಾನ ಮತ್ತು ಯುಎಇ ನಡುವಿನ ಪಂದ್ಯ ಒಂದು ಗಂಟೆಯಷ್ಟು ವಿಳಂಬವಾಗಿದೆ ಎಂದೂ ಈ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನೀವು ನಿಮ್ಮ ಹೋಟೆಲ್ ನಲ್ಲಿಯೇ ಉಳಿಯಿರಿ ಹಾಗೂ ಕ್ರೀಡಾಂಗಣಕ್ಕೆ ತೆರಳದಿರಿ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಆಟಗಾರರಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಆಟಗಾರರ ಆಟದ ಸಾಮಗ್ರಿಯ ಕಿಟ್ ಗಳು ಹಾಗೂ ಲಗೇಜ್ ಗಳು ಇನ್ನೂ ತಂಡದ ಬಸ್ ನಲ್ಲೇ ಇದ್ದರೂ, ತಂಡದ ಆಟಗಾರರನ್ನು ಮಾತ್ರ ಹೋಟೆಲ್ ನಲ್ಲಿಯೇ ಉಳಿಯುವಂತೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ಈ ಉದ್ವಿಗ್ನ ಪರಿಸ್ಥಿತಿಯ ಕುರಿತು ವಿವರಿಸಲು ಸದ್ಯದಲ್ಲೇ ತುರ್ತು ಪತ್ರಿಕಾಗೋಷ್ಠಿ ನಡೆಯಲಿದೆ ಎಂದು ವರದಿಯಾಗಿದೆ.
ಇತ್ತೀಚಿನ ಬೆಳವಣಿಗೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಂದೆ ಎರಡು ಪ್ರಮುಖ ಬೇಡಿಕೆಗಳನ್ನಿರಿಸಿದೆ ಎನ್ನಲಾಗಿದೆ.
ಮೊದಲನೆಯದಾಗಿ, ನಿಷ್ಪಕ್ಷಪಾತದ ಕೊರತೆಯನ್ನು ಪ್ರತಿಬಿಂಬಿಸಿರುವ ಆ್ಯಂಡಿ ಪೈಕ್ರಾಫ್ಟ್ ಅವರನ್ನು ತಕ್ಷಣವೇ ಅವರ ಅಧಿಕೃತ ಕರ್ತವ್ಯದಿಂದ ತೆಗೆದು ಹಾಕಬೇಕು. ಎರಡನೆಯದಾಗಿ, ರಾಜಕೀಯ ಪ್ರೇರಿತ ಹೇಳಿಕೆ ನೀಡಿರುವ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.
ಇದು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ. ಆದರೆ, ಈವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.