×
Ad

ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿ ಫೈನಲ್: ಶುಕ್ರವಾರ ಭಾರತಕ್ಕೆ ಜಪಾನ್ ತಂಡ ಎದುರಾಳಿ

Update: 2023-08-10 22:44 IST

Photo Credit: HOCKEY INDIA 

ಚೆನ್ನೈ, ಆ.10: ಅಜೇಯ ಗೆಲುವಿನ ದಾಖಲೆಯೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆತಿಥೇಯ ಭಾರತ ತಂಡ ಶುಕ್ರವಾರ ನಡೆಯಲಿರುವ ಸೆಮಿ ಫೈನಲ್ನಲ್ಲಿ ಜಪಾನ್ ತಂಡದ ಸವಾಲನ್ನ್ನು ಎದುರಿಸಲಿದೆ.

1932ರ ಒಲಿಂಪಿಕ್ ಗೇಮ್ಸ್ನಲ್ಲಿ ಮೊತ್ತ ಮೊದಲ ಪಂದ್ಯ ಆಡಿದ್ದ ಭಾರತ ಹಾಗೂ ಜಪಾನ್ ಅಂತರ್ರಾಷ್ಟ್ರೀಯ ಹಾಕಿಯಲ್ಲಿ ಸುದೀರ್ಘ ಸಮಯದ ಬಳಿಕ ಪರಸ್ಪರ ಸ್ಪರ್ಧೆ ಮಾಡುತ್ತಿವೆ. ಈ ತನಕ ಒಟ್ಟು 34 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತವು 27 ಪಂದ್ಯಗಳಲ್ಲಿ ಜಯ ಸಾಧಿಸಿ ಸ್ಪಷ್ಟ ಮೇಲುಗೈ ಸಾಧಿಸಿದರೆ, ಜಪಾನ್ ಕೇವಲ 3 ಬಾರಿ ಜಯ ಸಾಧಿಸಿದೆ. ಅಲ್ಲದೆ ಈ ಎರಡು ತಂಡಗಳು ನಾಲ್ಕು ಬಾರಿ ಪಂದ್ಯಗಳನ್ನು ಡ್ರಾ ಮಾಡಿಕೊಂಡಿವೆ.

ಕುತೂಹಲಕಾರಿ ವಿಚಾರವೆಂದರೆ ಭಾರತವು ಪ್ರಸಕ್ತ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಪಾನ್ ತಂಡವನ್ನು ಮಾತ್ರ ಸೋಲಿಸಲು ವಿಫಲವಾಗಿದೆ.

ಲೀಗ್ ಹಂತದಲ್ಲಿ ಭಾರತ ಹಾಗೂ ಜಪಾನ್ ನಡುವೆ ನಡೆದಿದ್ದ ಪಂದ್ಯವು 1-1ರಿಂದ ಡ್ರಾನಲ್ಲಿ ಕೊನೆಗೊಂಡಿತ್ತು. ಈ ಪಂದ್ಯವು ಬಲಿಷ್ಠ ಭಾರತ ವಿರುದ್ಧ ಜಪಾನ್ ತಂಡದ ಶಕ್ತಿ ಹಾಗೂ ಸ್ಪರ್ಧಾತ್ಮಕತೆಯನ್ನು ಬಿಂಬಿಸುತ್ತಿದೆ.

ಏಶ್ಯನ್ ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಭಾರತ ಹಾಗೂ ಜಪಾನ್ ಒಟ್ಟು 9 ಬಾರಿ ಸೆಣಸಾಡಿವೆ. ಈ ಪೈಕಿ ಭಾರತವು 5 ಬಾರಿ ಜಯ ಸಾಧಿಸಿದ್ದು, ಜಪಾನ್ 2 ಬಾರಿ ಗೆಲುವು ಕಂಡಿತ್ತು. ಉಳಿದೆರಡು ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿದ್ದವು.

ಏಶ್ಯನ್ ಚಾಂಪಿಯನ್ಸ್ ಟ್ರೋಫಿಗಿಂತ ಮೊದಲು ಭಾರತವು 2023ರ ಎಫ್ಐಎಚ್ ವರ್ಲ್ಡ್ಕಪ್ನಲ್ಲಿ ಜಪಾನ್ ವಿರುದ್ಧ 8-0 ಅಂತರದಿಂದ ಜಯ ಸಾಧಿಸಿ ಪ್ರಾಬಲ್ಯ ಮೆರೆದಿತ್ತು.

ಭಾರತವು ಸಮಗ್ರವಾಗಿ ಮೇಲುಗೈ ಸಾಧಿಸಿದ್ದರೂ ಕೂಡ ಜಪಾನ್ 3 ಬಾರಿ ಭಾರತ ತಂಡವನ್ನು ಸೋಲಿಸಿದೆ. ಏಶ್ಯಕಪ್ 2022ರಲ್ಲಿ 5-2, ಏಶ್ಯನ್ ಚಾಂಪಿಯನ್ಸ್ ಟ್ರೋಫಿ 2021ರಲ್ಲಿ 5-3 ಹಾಗೂ ಏಶ್ಯನ್ ಚಾಂಪಿಯನ್ಸ್ ಟ್ರೋಫಿ 2013ರಲ್ಲಿ 2-1 ಅಂತರದಿಂದ ಭಾರತವನ್ನು ಸೋಲಿಸಿತ್ತು. ಈ ಗೆಲುವು ಕ್ರೀಡೆಯಲ್ಲಿ ಎಲ್ಲವೂ ಸಾಧ್ಯವಿದೆ ಎಂದು ತೋರಿಸುತ್ತಿದೆ.

ಏಶ್ಯನ್ ಗೇಮ್ಸ್ಗೆ ಇನ್ನೊಂದು ತಿಂಗಳು ಬಾಕಿ ಉಳಿದಿದ್ದು, ಅದಕ್ಕೂ ಮೊದಲು ಏಶ್ಯನ್ ಚಾಂಪಿಯನ್ಸ್ ಟ್ರೋಫಿಯು ಭಾರತ ಯೋಜನೆ ರೂಪಿಸಿ ತಂಡವನ್ನು ಅಂತಿಮಗೊಳಿಸಲು ಇರುವ ಕೊನೆಯ ಸ್ಪರ್ಧಾತ್ಮಕ ಟೂರ್ನಿಯಾಗಿದೆ.

ಜಪಾನ್ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಜಯ ಸಾಧಿಸಿ ಪಾಕಿಸ್ತಾನವನ್ನು ಹಿಂದಿಕ್ಕಿತು. ಜಪಾನ್ ತಾನಾಡಿದ ಪಂದ್ಯಗಳಲ್ಲಿ ಸೋತಿದ್ದರೂ ತನ್ನ ಎದುರಾಳಿಗೆ ತೀವ್ರ ಸ್ಪರ್ಧೆಯೊಡ್ಡಲು ಸಫಲವಾಗಿತ್ತು.

ಭಾರತವು ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತವು ಫೈನಲ್ ತಲುಪುವ ನೆಚ್ಚಿನ ತಂಡವಾಗಿ ಉಳಿದಿದೆ. ಸ್ಟ್ರೈಕರ್ಗಳು ತಮ್ಮ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿದ್ದರೂ ಕೂಡ ಭಾರತದ ಯೋಜನೆಯು ಈ ತನಕ ಕಾರ್ಯಗತವಾಗಿದೆ.

ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ 300ನೇ ಅಂತರ್ರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News