×
Ad

ಏಶ್ಯನ್ ಶೂಟಿಂಗ್ ಚಾಂಪಿಯನ್‌ ಶಿಪ್ | ಮನು ಭಾಕರ್‌ ಗೆ 4ನೇ, ಇಶಾ ಸಿಂಗ್‌ ಗೆ 6ನೇ ಸ್ಥಾನ

Update: 2025-08-25 20:18 IST

Photo Credit: PTI

ಶೈಮ್ಕೆಂಟ್(ಕಝಕ್‌ಸ್ತಾನ), ಆ.25: ಒಲಿಂಪಿಕ್ಸ್‌ ನಲ್ಲಿ ಅವಳಿ ಪದಕ ವಿಜೇತೆ, ಭಾರತೀಯ ಶೂಟರ್ ಮನು ಭಾಕರ್ ಕಝಕ್‌ಸ್ತಾನದ ಶೈಮ್ಕೆಂಟ್‌ ನಲ್ಲಿ ಸೋಮವಾರ ನಡೆದ ಏಶ್ಯನ್ ಶೂಟಿಂಗ್ ಚಾಂಪಿಯನ್‌ ಶಿಪ್‌ ನ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧಾವಳಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಭಾಕರ್ ಅವರ ಸಹಪಾಠಿ ಇಶಾ ಸಿಂಗ್ 8 ಸ್ಪರ್ಧಿಗಳಿದ್ದ ಫೈನಲ್‌ ನಲ್ಲಿ 18 ಅಂಕ ಕಲೆ ಹಾಕಿ ಆರನೇ ಸ್ಥಾನ ಪಡೆದರು. ಮನು ಭಾಕರ್(25 ಅಂಕ)ಕಂಚಿನ ಪದಕ ವಿಜೇತೆ ವಿಯೆಟ್ನಾಂನ ವಿನ್ ಟ್ರಿನ್(29 ಅಂಕ)ಗಿಂತ ನಾಲ್ಕು ಅಂಕದಿಂದ ಹಿಂದುಳಿದರು.

ಚೀನಾದ ಶೂಟರ್‌ಗಳಾದ ಯುಯು ಝಾಂಗ್ ಹಾಗೂ ಜಿಯಾರುಕ್ಸುಯನ್ ಕ್ಸಿಯಾವೊ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದರು.

ಭಾರತದ ತ್ರಿವಳಿ ಶೂಟರ್‌ ಗಳಾದ ಭಾಕರ್, ಇಶಾ ಹಾಗೂ ಸಿಮ್ರನ್‌ಪ್ರೀತ್ ಕೌರ್ ಒಟ್ಟು 1,749 ಅಂಕ ಗಳಿಸಿ ಟೀಮ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು. ಚೀನಾ ಹಾಗೂ ದಕ್ಷಿಣ ಕೊರಿಯಾ ತಂಡಗಳು ಮೊದಲೆರಡು ಸ್ಥಾನ ಪಡೆದವು.

ಮಹಿಳೆಯರ 25 ಮೀ. ಪಿಸ್ತೂಲ್ ಕ್ವಾಲಿಫಿಕೇಶನ್ಸ್‌ ನಲ್ಲಿ ಮನು ಭಾಕರ್ ಹಾಗೂ ಚೀನಾದ ಕ್ಸಿಯಾವೊ ಹಾಗೂ ಝಾಂಗ್‌ರನ್ನು ಹಿಂದಿಕ್ಕಿದ ಇಶಾ ಸಿಂಗ್ ಅಗ್ರ ಸ್ಥಾನ ಪಡೆದರು.

ಇಶಾ ಸಿಂಗ್ ಪಂದ್ಯಾವಳಿಯಲ್ಲಿ ಈ ಮೊದಲು ಮಹಿಳೆಯರ 10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ಹಾಗೂ ಟೀಮ್ ಸ್ಪರ್ಧೆಗಳಲ್ಲಿ ಕಂಚಿನ ಪದಕ ಜಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News