×
Ad

ಮೊದಲ ಟೆಸ್ಟ್: ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಕ್ಕೆ 360 ರನ್ ಜಯ

Update: 2023-12-17 22:05 IST

Photo : Cricket Australia

ಪರ್ತ್ : ಪಾಕಿಸ್ತಾನ ತಂಡವನ್ನು ಎರಡನೇ ಇನಿಂಗ್ಸ್‌ ನಲ್ಲಿ ಕೇವಲ 89 ರನ್‌ ಗೆ ಆಲೌಟ್ ಮಾಡಿರುವ ಆಸ್ಟ್ರೇಲಿಯ ತಂಡ ಪ್ರಥಮ ಟೆಸ್ಟ್ನ ನಾಲ್ಕನೇ ದಿನವಾದ ರವಿವಾರ 360 ರನ್ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ.

ರವಿವಾರ ಒಪ್ಟಸ್ ಸ್ಟೇಡಿಯಮ್ನ ವೇಗಿಗಳ ಸ್ನೇಹಿ ಪಿಚ್‌ ನಲ್ಲಿ ಎರಡು ವಿಕೆಟ್‌ ಗಳನ್ನು ಉರುಳಿಸಿದ ನಥಾನ್ ಲಿಯೊನ್ ವಿಶೇಷ 500 ವಿಕೆಟ್ ಕ್ಲಬ್‌ ಗೆ ಸೇರ್ಪಡೆಯಾದರು.

ಆಸ್ಟ್ರೇಲಿಯದ ಬಲಿಷ್ಠ ವೇಗದ ಬೌಲಿಂಗ್ ದಾಳಿಯು ಪಾಕಿಸ್ತಾನದ ಅಗ್ರ ಸರದಿಯನ್ನು ಪುಡಿಗಟ್ಟಿತು. ಲಿಯೊನ್ ಬಾಲಂಗೋಚಿ ಫಹೀಮ್ ಅಶ್ರಫ್ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿ 500ನೇ ವಿಕೆಟ್ ಮೈಲಿಗಲ್ಲು ತಲುಪಿದರು.

ಮೊದಲ ಇನಿಂಗ್ಸ್‌ ನಲ್ಲಿ 487 ರನ್ ಗಳಿಸಿದ್ದ ಆಸ್ಟ್ರೇಲಿಯ ತಂಡ ಪಾಕಿಸ್ತಾನವನ್ನು ಮೊದಲ ಇನಿಂಗ್ಸ್‌ ನಲ್ಲಿ 271 ರನ್‌ ಗೆ ಆಲೌಟ್ ಮಾಡಿತ್ತು. ರವಿವಾರ ಭೋಜನ ವಿರಾಮದ ನಂತರ ತನ್ನ ಎರಡನೇ ಇನಿಂಗ್ಸ್ ನ್ನು 5 ವಿಕೆಟ್ ನಷ್ಟಕ್ಕೆ 233 ರನ್‌ ಗೆ ಡಿಕ್ಲೇರ್ ಮಾಡಿದ ಆಸ್ಟ್ರೇಲಿಯವು ಪ್ರವಾಸಿ ಪಾಕ್ ತಂಡದ ಗೆಲುವಿಗೆ 450 ರನ್ ಗುರಿ ನೀಡಿತು.

ರನ್ ಚೇಸ್ ವೇಳೆ ಪಾಕಿಸ್ತಾನ ತಂಡ ನಾಲ್ಕನೇ ಇನಿಂಗ್ಸ್‌ ನಲ್ಲಿ ಟೀ ವಿರಾಮಕ್ಕೆ ಮೊದಲೇ 15 ಓವರ್ಗಳಲ್ಲಿ 48 ರನ್‌ ಗೆ 4 ವಿಕೆಟ್ ಕಳೆದುಕೊಂಡು ಆರಂಭಿಕ ಕುಸಿತಕ್ಕೆ ಒಳಗಾಯಿತು. ಇದರಿಂದ ಚೇತರಿಸಿಕೊಳ್ಳುವಲ್ಲಿ ವಿಫಲವಾದ ಪಾಕಿಸ್ತಾನ 30.2 ಓವರ್ಗಳಲ್ಲಿ 89 ರನ್‌ ಗೆ ಆಲೌಟಾಯಿತು. ಪಾಕ್ ಪರ ಸೌದ್ ಶಕೀಲ್(24 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು.

ತಲಾ ಮೂರು ವಿಕೆಟ್‌ ಗಳನ್ನು ಉರುಳಿಸಿದ ವೇಗಿದ್ವಯರಾದ ಜೋಶ್ ಹೇಝಲ್ವುಡ್(3-13) ಹಾಗೂ ಮಿಚೆಲ್ ಸ್ಟಾರ್ಕ್(3-31) ಪಾಕಿಸ್ತಾನದ ಮೇಲೆ ಪ್ರಹಾರ ನಡೆಸಿದರು. ಆದರೆ ಲಿಯೊನ್(2-14) ಅವರ ಸಾಧನೆ ಎಲ್ಲರ ಗಮನ ಸೆಳೆಯಿತು.

ಲಿಯೊನ್ 28ನೇ ಓವರ್ನಲ್ಲಿ ಅಶ್ರಫ್ ವಿಕೆಟ್ ಕಬಳಿಸಿ ಮಹತ್ವದ ಮೈಲಿಗಲ್ಲು ತಲುಪಿದರು.

ದಿನದ ಆರಂಭದಲ್ಲಿ ಪಾಕಿಸ್ತಾನದ ಪರ ಚೊಚ್ಚಲ ಪಂದ್ಯವನ್ನಾಡಿದ ವೇಗಿಗಳಾದ ಖುರ್ರಮ್ ಶಹಝಾದ್(3-45) ಹಾಗೂ ಆಮಿರ್ ಜಮಾಲ್(1-28) ಆಸ್ಟ್ರೇಲಿಯದ ಮೂರು ವಿಕೆಟ್‌ ಗಳನ್ನು ಪಡೆದರು.

ಉಸ್ಮಾನ್ ಖ್ವಾಜಾ(90 ರನ್) ಹಾಗೂ ಮಿಚೆಲ್ ಮಾರ್ಷ್(ಔಟಾಗದೆ 63)5ನೇ ವಿಕೆಟ್‌ ಗೆ 126 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು ಹಿಗ್ಗಿಸಿದರು. ಮಾರ್ಷ್ 68 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ಅಜೇಯವಾಗುಳಿದರು. ಮಾಜಿ ನಾಯಕ ಸ್ಟೀವ್ ಸ್ಮಿತ್ ಜೊತೆ 3ನೇ ವಿಕೆಟ್‌ ಗೆ 82 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದ್ದ ಖ್ವಾಜಾ 63.2 ಓವರ್ನಲ್ಲಿ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದ ತಕ್ಷಣ ಆಸ್ಟ್ರೇಲಿಯವು ತನ್ನ 2ನೇ ಇನಿಂಗ್ಸ್ ಡಿಕ್ಲೇರ್ ಮಾಡಿತು.

ಎರಡೂ ಇನಿಂಗ್ಸ್ ಗಳಲ್ಲಿ ಅರ್ಧಶತಕ(90 ಹಾಗೂ ಔಟಾಗದೆ 63)ಗಳಿಸಿದ ಮಿಚೆಲ್ ಮಾರ್ಷ್ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News