×
Ad

ಆಸ್ಟ್ರೇಲಿಯನ್ ಓಪನ್ | ವೀನಸ್ ವಿಲಿಯಮ್ಸ್‌ಗೆ ವೈಲ್ಡ್ ಕಾರ್ಡ್ ಪ್ರವೇಶ

Update: 2026-01-02 21:41 IST

ವೀನಸ್ ವಿಲಿಯಮ್ಸ್‌ | Photo Credit : AP \ PTI 

ಮೆಲ್ಬರ್ನ್, ಜ.2: ಏಳು ಬಾರಿ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ವೀನಸ್ ವಿಲಿಯಮ್ಸ್, ಮೆಲ್ಬರ್ನ್‌ನಲ್ಲಿ ಜನವರಿ 18ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದಾರೆ.

28 ವರ್ಷಗಳ ಹಿಂದೆ ಮೊದಲ ಪಂದ್ಯವನ್ನಾಡಿದ್ದ ಮೆಲ್ಬರ್ನ್ ಪಾರ್ಕ್‌ ಗೆ 45ರ ಹರೆಯದ ವೀನಸ್ ವಿಲಿಯಮ್ಸ್ ವಾಪಸಾಗುತ್ತಿದ್ದಾರೆ. 1998ರಲ್ಲಿ ವೀನಸ್ ತಮ್ಮ ಕಿರಿಯ ಸಹೋದರಿ ಸೆರೆನಾರನ್ನು ದ್ವಿತೀಯ ಸುತ್ತಿನಲ್ಲಿ ಸೋಲಿಸಿದ್ದರು. ಕ್ವಾರ್ಟರ್ ಫೈನಲ್‌ ನಲ್ಲಿ ತಮ್ಮದೇ ದೇಶದ ಲಿಂಡ್ಸೆ ಡವೆನ್‌ ಪೋರ್ಟ್ ವಿರುದ್ಧ ಸೋಲು ಕಂಡಿದ್ದರು.

ನ್ಯೂಝಿಲ್ಯಾಂಡ್‌ ನ ಆಕ್ಲೆಂಡ್‌ ನಲ್ಲಿ ಆಡುವುದಾಗಿ ವೀನಸ್ ಅವರು ನವೆಂಬರ್‌ನಲ್ಲಿ ಘೋಷಿಸಿದ್ದರು. ಅಲ್ಲಿ ಕೂಡ ಅವರು ವೈಲ್ಡ್ ಕಾರ್ಡ್ ಪಡೆದಿದ್ದರು. ಆಸ್ಟ್ರೇಲಿಯನ್ ಓಪನ್ ಆರಂಭವಾಗಲು ಎರಡು ವಾರಗಳ ಮುನ್ನ ಆಕ್ಲೆಂಡ್ ಓಪನ್ ಆರಂಭವಾಗಲಿದೆ.

2021ರಲ್ಲಿ ಮೆಲ್ಬರ್ನ್‌ನಲ್ಲಿ ಕೊನೆಯ ಬಾರಿ ಆಡಿದ್ದ ವೀನಸ್, 2003 ಹಾಗೂ 2017ರಲ್ಲಿ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಸೆರೆನಾಗೆ ಎರಡು ಬಾರಿ ಸೋಲನುಭವಿಸಿ ರನ್ನರ್ ಅಪ್ ಆಗಿದ್ದರು.

‘‘ಆಸ್ಟ್ರೇಲಿಯಕ್ಕೆ ಮರಳಲು ನಾನು ಉತ್ಸುಕಳಾಗಿದ್ದೇನೆ. ಆಸ್ಟ್ರೇಲಿಯನ್ ಸಮ್ಮರ್‌ನಲ್ಲಿ ಆಡಲು ಎದುರು ನೋಡುತ್ತಿದ್ದೇನೆ. ಅಲ್ಲಿ ನನಗೆ ಸಾಕಷ್ಟು ಸ್ಮರಣೀಯ ನೆನಪುಗಳಿವೆ. ನನ್ನ ವೃತ್ತಿ ಬದುಕಿಗೆ ಅರ್ಥ ನೀಡಿರುವ ಸ್ಥಳಕ್ಕೆ ಮರಳುವ ಅವಕಾಶ ಲಭಿಸಿದ್ದಕ್ಕೆ ಆಭಾರಿಯಾಗಿದ್ದೇನೆ’’ ಎಂದು ವಿಲಿಯಮ್ಸ್ ಹೇಳಿದ್ದಾರೆ.

ವೀನಸ್ ವಿಲಿಯಮ್ಸ್ ಅವರು ಮೆಲ್ಬರ್ನ್ ಪಾರ್ಕ್‌ನಲ್ಲಿ 54 ಪಂದ್ಯಗಳಲ್ಲಿ ಗೆಲುವು ಹಾಗೂ 21 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.

ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಸ್ಪರ್ಧಿಸುವ ಹಿರಿಯ ಆಟಗಾರ್ತಿ ಎಂಬ ದಾಖಲೆಯನ್ನು ವೀನಸ್ ಮುರಿಯಲಿದ್ದಾರೆ. ಇದುವರೆಗೆ ಈ ದಾಖಲೆ ಜಪಾನ್‌ನ ಕಿಮಿಕೊ ಡೇಟ್ ಅವರ ಹೆಸರಿನಲ್ಲಿ ಇತ್ತು. ಕಿಮಿಕೊ 2015ರಲ್ಲಿ 44ರ ವಯಸ್ಸಿನಲ್ಲಿ ಮೆಲ್ಬರ್ನ್ ಪಾರ್ಕ್‌ ನಲ್ಲಿ ಆಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News