×
Ad

ಆಸ್ಟ್ರೇಲಿಯನ್ ಓಪನ್: ನೊವಾಕ್ ಜೊಕೊವಿಕ್ ಸೆಮಿ ಫೈನಲ್ ಗೆ

Update: 2024-01-23 23:26 IST

ನೊವಾಕ್ ಜೊಕೊವಿಕ್ | Photo: NDTV 

ಮೆಲ್ಬರ್ನ್ : ಅಮೆರಿಕ ಆಟಗಾರ ಟೇಲರ್ ಫ್ರಿಟ್ಝ್ ವಿರುದ್ಧ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ ಸರ್ಬಿಯ ಆಟಗಾರ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿ ಫೈಲ್ಗೆ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ಜೊಕೊವಿಕ್ 12ನೇ ಶ್ರೇಯಾಂಕದ ಫ್ರಿಟ್ಝ್ರನ್ನು 7-6(3), 4-6, 6-2, 6-3 ಸೆಟ್ಗಳ ಅಂತರದಿಂದ ಮಣಿಸಿದರು. ಗೆಲುವಿನ ಮೂಲಕ 36 ವಯಸ್ಸಿನ ಜೊಕೊವಿಕ್ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ದಾಖಲೆಯ 48ನೇ ಬಾರಿ ಸೆಮಿ ಫೈಲ್ಗೆ ತಲುಪಿದ್ದಾರೆ.

2021ರಲ್ಲಿ ಮೆಲ್ಬರ್ನ್ ಪಾರ್ಕ್ ನಲ್ಲಿ ನಡೆದಿದ್ದ ಐದು ಸೆಟ್ಗಳ ಪಂದ್ಯ ಹಾಗೂ ಕಳೆದ ವರ್ಷ ಯುಎಸ್ ಓಪನ್ ಸಹಿತ ಫ್ರಿಟ್ಝ್ ವಿರುದ್ಧ ಆಡಿರುವ ಎಲ್ಲ 8 ಪಂದ್ಯಗಳಲ್ಲಿ ಜಯಶಾಲಿಯಾಗಿರುವ ಹೊರತಾಗಿಯೂ ಜೊಕೊವಿಕ್ ಇಂದಿನ ಪಂದ್ಯದಲ್ಲಿ ಕಠಿಣ ಪರೀಕ್ಷೆ ಎದುರಿಸಿದರು.

ಆಸ್ಟ್ರೇಲಿಯನ್  ಓಪನ್ನಲ್ಲಿ 11ನೇ ಪ್ರಶಸ್ತಿ ಹಾಗೂ ಗ್ರ್ಯಾನ್ಸ್ಲಾಮ್ನಲ್ಲಿ 25ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಜೊಕೊವಿಕ್ ದೀರ್ಘ ಸಮಯ ನಡೆದ ಮೊದಲ ಸೆಟ್ನಲ್ಲಿ ತೀವ್ರ ಪ್ರತಿರೋಧ ಎದುರಿಸಿದರು.  84 ನಿಮಿಷಗಳ ಕಾಲ ನಡೆದ ಮೊದಲ ಸೆಟ್ಟ ನ್ನು ಜೊಕೊವಿಕ್ 7-6(3) ಅಂತರದಿಂದ ಟ್ರೈ ಬ್ರೇಕರ್ನಲ್ಲಿ ಗೆದ್ದುಕೊಂಡರು.

ಎರಡನೇ ಸೆಟ್ನಲ್ಲಿ ಫ್ರಿಟ್ಝ್ ಶಕ್ತಿಶಾಲಿ ಹಿಂಗೈಹೊಡೆತದ ಮೂಲಕ ಜೊಕೊವಿಕ್ಗೆ ತೀವ್ರ ಪೈಪೋಟಿ ನೀಡಿದರು. 2ನೇ ಸೆಟನ್ನು 6-4 ಅಂತರದಿಂದ ಜಯಿಸಿ ಸಮಬಲದ ಹೋರಾಟ ನೀಡಿದರು.

ಮೂರನೇ ಸೆಟ್ ವೇಳೆ ತೀವ್ರ ಸೆಖೆಯಿಂದ ಬಳಲಿದ ಜೊಕೊವಿಕ್ ತನ್ನ ತಲೆ ಮೇಲೆ ಐಸ್ಪ್ಯಾಕ್ ಇಟ್ಟುಕೊಂಡರು. ಹಲವು ಪ್ರಯತ್ನಗಳ ನಂತರ 2-0 ಮುನ್ನಡೆ ಪಡೆದ ಜೊಕೊವಿಕ್ 3ನೇ ಸೆಟ್ಟನ್ನು 6-2 ಅಂತರದಿಂದ ಗೆದ್ದುಕೊಂಡರು.

ನಾಲ್ಕನೇ ಸೆಟ್ನಲ್ಲಿ ಫ್ರಿಟ್ಝ್ ಟೆನಿಸ್ ಅಂಗಣದಲ್ಲಿ ಚುರುಕಿನಿಂದ ಓಡಾಡಲು ವಿಫಲವಾಗಿದ್ದು ಜೊಕೊವಿಕ್ ಇದರ ಲಾಭ ಪಡೆದರು. ಫ್ರೀಟ್ಝ್ ಮರು ಹೋರಾಟ ನೀಡಲು ಯತ್ನಿಸಿದರೂ ಜೊಕೊವಿಕ್ 4ನೇ ಸೆಟ್ಟನ್ನು 6-3 ಅಂತರದಿಂದ ಗೆದ್ದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News