×
Ad

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ| ಸತತ ನಾಲ್ಕನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟ ಸಬಲೆಂಕಾ

Update: 2026-01-29 21:11 IST

ಎಲಿನಾ ಸ್ವಿಟೋಲಿನಾ | Photo Credit : X

ಮೆಲ್ಬರ್ನ್, ಜ.29: ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ಬೆಲಾರುಸ್ ಆಟಗಾರ್ತಿ ಆರ್ಯನಾ ಸಬಲೆಂಕಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸತತ ನಾಲ್ಕನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಸಬಲೆಂಕಾ ಅವರು ಸ್ವಿಟೋಲಿನಾರನ್ನು 6-2, 6-3 ನೇರ ಸೆಟ್‌ಗಳಿಂದ ಸದೆಬಡಿದರು.

ಸಬಲೆಂಕಾ ಅವರು ಮೆಲ್ಬರ್ನ್ ಪಾರ್ಕ್‌ನಲ್ಲಿ ನಾಲ್ಕು ವರ್ಷಗಳಲ್ಲಿ ಮೂರನೇ ಸಿಂಗಲ್ಸ್ ಕಿರೀಟ ಹಾಗೂ ಒಟ್ಟಾರೆ ಐದನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ಚಿತ್ತಹರಿಸಿದ್ದಾರೆ.

27ರ ಹರೆಯದ ಸಬಲೆಂಕಾ ಅವರು ವೃತ್ತಿಪರ ಟೆನಿಸ್ ಯುಗದಲ್ಲಿ ಸತತ ನಾಲ್ಕು ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ ಮೂರನೇ ಆಟಗಾರ್ತಿಯಾಗಿದ್ದಾರೆ. ಇವೊನ್ ಗೂಲಾಗಾಂಗ್ ಕಾವ್ಲೆ(1971-76)ಹಾಗೂ ಮಾರ್ಟಿನಾ ಹಿಂಗಿಸ್(1997-2002)ಸತತ ಆರು ಬಾರಿ ಫೈನಲ್‌ಗೆ ತಲುಪಿರುವ ಸಾಧನೆ ಮಾಡಿದ್ದಾರೆ.

‘‘ನನಗೆ ಇದು ನಂಬಲಾಗುತ್ತಿಲ್ಲ. ಇದೊಂದು ಅಮೋಘ ಸಾಧನೆ. ಆದರೆ ನನ್ನ ಕೆಲಸ ಇಲ್ಲಿಗೇ ಮುಗಿದಿಲ್ಲ. ಈ ಗೆಲುವಿನಿಂದ ನನಗೆ ತುಂಬಾ ಸಂತೋಷವಾಗಿದೆ. ಸ್ವಿಟೋಲಿನಾ ಕಠಿಣ ಎದುರಾಳಿಯಾಗಿದ್ದರು. ಇಡೀ ವಾರ ಅತ್ಯುತ್ತಮವಾಗಿ ಆಡಿದ್ದರು’’ ಎಂದು ವಿಶ್ವದ ನಂ.1 ಆಟಗಾರ್ತಿ ಸಬಲೆಂಕಾ ಹೇಳಿದ್ದಾರೆ.

2022ರಲ್ಲಿ ರಶ್ಯವು ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ರಶ್ಯ ಹಾಗೂ ಬೆಲಾರುಸ್ ಟೆನಿಸಿಗರಿಗೆ ಗ್ರ್ಯಾನ್‌ಸ್ಲಾಮ್‌ಗಳು ಹಾಗೂ ಟೂರ್ ಸ್ಪರ್ಧೆಗಳಲ್ಲಿ ತಮ್ಮ ದೇಶಗಳನ್ನು ಪ್ರತಿನಿಧಿಸುವುದಕ್ಕೆ ನಿಷೇಧ ಹೇರಲಾಗಿತ್ತು.

31ರ ಹರೆಯದ ಸ್ವಿಟೋಲಿನಾ ನೇರ ಸೆಟ್‌ಗಳಿಂದ ಸೋತಿದ್ದರೂ ಆರಂಭದಿಂದ ಅಂತ್ಯದ ತನಕ ಕಠಿಣ ಹೋರಾಟ ನೀಡಿದ್ದರು.

ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಸಬಲೆಂಕಾ ಅವರು ಎಲೆನಾ ರೈಬಾಕಿನಾರನ್ನು ಎದುರಿಸಲಿದ್ದಾರೆ.

ಸೆಮಿ ಫೈನಲ್‌ನಲ್ಲಿ ಎಡವಿದ ಜೆಸ್ಸಿಕಾ ಪೆಗುಲಾ:

ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸೆಮಿ ಫೈನಲ್‌ನಲ್ಲಿ ಜೆಸ್ಸಿಕಾ ಪೆಗುಲಾರನ್ನು ಮಣಿಸಿದ ಕಝಕ್‌ಸ್ತಾನದ ಎಲೆನಾ ರೈಬಾಕಿನಾ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದರು.

ಎರಡನೇ ಗ್ರ್ಯಾನ್‌ಸ್ಲಾಮ್ ಕಿರೀಟದ ಮೇಲೆ ಕಣ್ಣಿಟ್ಟಿರುವ ಐದನೆ ಶ್ರೇಯಾಂಕದ ರೈಬಾಕಿನಾ ಅವರು ರಾಡ್ ಲಾವೆರ್ ಅರೆನಾದಲ್ಲಿ ಒಂದು ಗಂಟೆ-40 ನಿಮಿಷಗಳ ಕಾಲ ನಡೆದ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಆಟಗಾರ್ತಿ ಪೆಗುಲಾರನ್ನು 6-3, 7-6(9/7) ಸೆಟ್‌ಗಳ ಅಂತರದಿಂದ ಮಣಿಸಿದರು.

ಪಂದ್ಯಾವಳಿಯಲ್ಲಿ ಇನ್ನೂ ಒಂದೂ ಸೆಟ್ ಸೋಲದ ರೈ ಬಾಕಿನಾ ಶನಿವಾರ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಆರ್ಯನಾ ಸಬಲೆಂಕಾರ ಸವಾಲನ್ನು ಎದುರಿಸಲಿದ್ದಾರೆ. ಈ ಇಬ್ಬರು 2023ರ ಫೈನಲ್‌ನಲ್ಲಿ ಕೂಡ ಮುಖಾಮುಖಿಯಾಗಿದ್ದರು. ಮೂರು ವರ್ಷಗಳ ಹಿಂದೆ ಸಬಲೆಂಕಾ ಅವರು ರೈಬಾಕಿನಾರ ಪ್ರಶಸ್ತಿಯ ಕನಸನ್ನು ಭಗ್ನಗೊಳಿಸಿದ್ದರು.

ಮಾಸ್ಕೊದಲ್ಲಿ ಜನಿಸಿರುವ ರೈ ಬಾಕಿನಾ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಇಗಾ ಸ್ವಿಯಾಟೆಕ್‌ರನ್ನು ಮಣಿಸಿದ್ದರು.

2022ರಲ್ಲಿ ವಿಂಬಲ್ಡನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ರೈಬಾಕಿನಾ ಮೂರೂವರೆ ವರ್ಷಗಳ ನಂತರ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ.

ಇತ್ತೀಚೆಗೆ ಭರ್ಜರಿ ಫಾರ್ಮ್‌ನಲ್ಲಿರುವ ರೈಬಾಕಿನಾ ನವೆಂಬರ್‌ನಲ್ಲಿ ರಿಯಾದ್‌ನಲ್ಲಿ ನಡೆದಿದ್ದ ಡಬ್ಲ್ಯುಟಿಎ ಫೈನಲ್ಸ್ ಟೂರ್ನಿಯಲ್ಲಿ ಸಬಲೆಂಕಾರನ್ನು ಸೋಲಿಸಿದ್ದರು. ಹಿಂದಿನ 20 ಪಂದ್ಯಗಳ ಪೈಕಿ 19ರಲ್ಲಿ ಜಯಶಾಲಿಯಾಗಿದ್ದಾರೆ. ಇದೀಗ ಮೂರನೇ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News