×
Ad

ಬಹಿಷ್ಕಾರದ ಕಾರ್ಮೋಡದ ನಡುವೆ ಟಿ-20 ವಿಶ್ವಕಪ್‌ಗೆ ವಿಮಾನದ ಟಿಕೆಟ್ ಕಾಯ್ದಿರಿಸಿದ ಪಾಕಿಸ್ತಾನ ತಂಡ

Update: 2026-01-29 22:01 IST

ಸಾಂದರ್ಭಿಕ ಚಿತ್ರ | Photo Credit ; PTI

ಹೊಸದಿಲ್ಲಿ, ಜ.29: ಮುಂದಿನ ತಿಂಗಳು ಆರಂಭವಾಗಲಿರುವ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುರಿತು ಅನಿಶ್ಚಿತತೆ ಮುಂದುವರಿದಿರುವಂತೆಯೆ ಸೋಮವಾರ ಕೊಲಂಬೊಕ್ಕೆ ತೆರಳಲು ಪಾಕಿಸ್ತಾನದ ಟಿ-20 ಕ್ರಿಕೆಟ್ ತಂಡವು ವಿಮಾನದ ಟಿಕೆಟ್ ಕಾಯ್ದಿರಿಸಿದೆ.

2026ರ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7ರಿಂದ ಮಾರ್ಚ್ 8ರ ತನಕ ನಡೆಯಲಿದೆ.

ಪಾಕಿಸ್ತಾನ ತಂಡವು ವಿಮಾನವೇರುವ ಮೊದಲು ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

‘ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಅನಿಶ್ಚಿತತೆಯ ಹೊರತಾಗಿಯೂ ಪಾಕಿಸ್ತಾನ ಕ್ರಿಕೆಟ್ ತಂಡವು ಲಾಹೋರ್‌ನಿಂದ ಏರ್ ಲಂಕಾ ವಿಮಾನದ ಮೂಲಕ ಕೊಲಂಬೊಗೆ ಪ್ರಯಾಣ ಬೆಳೆಸಲು ಆಸ್ಟ್ರೇಲಿಯ ತಂಡದೊಂದಿಗೆ ಟಿಕೆಟ್ ಬುಕ್ ಮಾಡಿದೆ. ಶುಕ್ರವಾರದ ವೇಳೆಗೆ ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಅವರು ಮೆಗಾ ಸ್ಪರ್ಧೆಯಲ್ಲಿ ಪಾಕ್ ತಂಡದ ಭಾಗವಹಿಸುವಿಕೆಗೆ ಸಂಬಂಧಿಸಿದ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಿದ್ದಾರೆ’ ಎಂದು ಟೆಲಿಕಾಂ ಏಶ್ಯಾ ಸ್ಪೋರ್ಟ್‌ಗೆ ಮೂಲಗಳು ತಿಳಿಸಿವೆ.

ಭದ್ರತಾ ಕಾರಣಗಳಿಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಮನವಿಯನ್ನು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ತಿರಸ್ಕರಿಸಿದ ನಂತರ ನಖ್ವಿ ಪಾಕಿಸ್ತಾನ ತಂಡ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಕುರಿತಾಗಿ ಅನುಮಾನ ವ್ಯಕ್ತಪಡಿಸಿದ್ದರು.

ಬಾಂಗ್ಲಾದೇಶ ತಂಡವನ್ನು ವಿಶ್ವಕಪ್‌ನಿಂದ ಹೊರಹಾಕಿದ್ದನ್ನು ಪ್ರತಿಭಟಿಸಿ ಪಾಕಿಸ್ತಾನ ವಿಶ್ವಕಪ್‌ನಿಂದ ಹೊರ ನಡೆಯುವ ಸಾಧ್ಯತೆಯಿದೆ ಎಂದು ಪಿಸಿಬಿ ಅಧ್ಯಕ್ಷ ನಖ್ವಿ ಹೇಳಿದ್ದರು.

ಈ ವಾರಾರಂಭದಲ್ಲಿ ಇಸ್ಲಾಮಾಬಾದ್‌ನಲ್ಲಿ ಪ್ರಧಾನಿ ಶಹಬಾಝ್ ಶರೀಫ್‌ರನ್ನು ಭೇಟಿಯಾಗಿದ್ದ ನಖ್ವಿ ಅವರಿಂದ ಮಾರ್ಗದರ್ಶನ ಪಡೆದಿದ್ದರು. ಬಾಂಗ್ಲಾದೇಶವನ್ನು ಬೆಂಬಲಿಸುವ ಪಾಕಿಸ್ತಾನದ ನಿಲುವನ್ನು ಶರೀಫ್ ಬೆಂಬಲಿಸಿದ್ದರು.

ರಾಜಕೀಯ ಹಾಗೂ ಆಡಳಿತಾತ್ಮಕ ಗೊಂದಲದ ನಡುವೆಯೂ ಮೈದಾನದಲ್ಲಿ ಸಿದ್ಧತೆಗಳು ಮುಂದುವರಿದಿವೆ. ಗುರುವಾರ ಲಾಹೋರ್‌ನಲ್ಲಿ ಆರಂಭವಾಗಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಪಾಕಿಸ್ತಾನ ತಂಡವು ಆಸ್ಟ್ರೇಲಿಯ ತಂಡವನ್ನು ಎದುರಿಸಿದ್ದು, ಆಟಗಾರರಿಗೆ ಈ ಪಂದ್ಯದತ್ತ ಗಮನ ನೀಡಲು ಕೇಳಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News