ಟೆನಿಸ್‌ಗೆ ಮರಳುವ ಕುರಿತು ವದಂತಿ: ಅಸ್ಪಷ್ಟ ಉತ್ತರ ನೀಡಿದ ಸೆರೆನಾ ವಿಲಿಯಮ್ಸ್
ಸೆರೆನಾ ವಿಲಿಯಮ್ಸ್ | Photo Credit : PTI
ನ್ಯೂಯಾರ್ಕ್, ಜ.29: ಟೆನಿಸ್‌ಗೆ ಮರಳುವ ಸಾಧ್ಯತೆಯ ಬಗೆಗಿನ ವದಂತಿಗೆ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸ್ಪಷ್ಟ ಉತ್ತರ ನೀಡಲಿಲ್ಲ.
‘‘ನನಗೆ ಏನೂ ಗೊತ್ತಿಲ್ಲ, ಏನಾಗುತ್ತದೆ ಎಂದು ನೋಡಲಿದ್ದೇನೆ’’ಎಂದು ಸೆರೆನಾ ಉತ್ತರಿಸಿದ್ದಾರೆ.
23 ಬಾರಿ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದಿರುವ 44ರ ವಯಸ್ಸಿನ ಎರಡು ಮಕ್ಕಳ ತಾಯಿ ಸೆರೆನಾ ವಿಲಿಯಮ್ಸ್ ಅವರು 2022ರ ಯು.ಎಸ್.ಓಪನ್‌ನಲ್ಲಿ ಮೂರನೇ ಸುತ್ತಿನಲ್ಲಿ ಸೋತ ನಂತರ ಟೆನಿಸ್‌ನಲ್ಲಿ ಸ್ಪರ್ಧಿಸಿಲ್ಲ.
ಆದರೆ ಅವರು ಡಿಸೆಂಬರ್‌ನಲ್ಲಿ ಟೆನಿಸ್‌ನ ಡೋಪಿಂಗ್ ವಿರೋಧಿ ಪರೀಕ್ಷಾ ಗುಂಪಿಗೆ ಮರು ಪ್ರವೇಶಿಸಿದ್ದರು. ಇದು ಅವರು ಟೆನಿಸ್‌ಗೆ ಮರಳುವ ವದಂತಿಗೆ ಕಾರಣವಾಗಿತ್ತು.
ಬುಧವಾರ ‘ಟುಡೇ ಆನ್ ಟೆಲಿವಿಷನ್ ಶೋ’ನಲ್ಲಿ ಸೆರೆನಾ ಬಳಿ ಟೆನಿಸ್‌ಗೆ ಮರಳುತ್ತೀರಾ? ಎಂದು ಪ್ರಶ್ನಿಸಲಾಯಿತು. ಯಾವುದೇ ಯೋಜನೆಯನ್ನು ದೃಢೀಕರಿಸಲು ನಿರಾಕರಿಸಿದ ಸೆರೆನಾ, ಏನನ್ನೂ ನಿರಾಕರಿಸಲೂ ಇಲ್ಲ.
‘‘ನಾನು ಈಗ ನನ್ನ ಜೀವನವನ್ನು ಆನಂದಿಸುತ್ತಿದ್ದೇನೆ. ಟೆನಿಸ್‌ಗೆ ಮರಳುತ್ತೇನೋ,ಇಲ್ಲವೋ ಎಂದು ನನಗೆ ಗೊತ್ತಿಲ್ಲ. ಏನಾಗುತ್ತದೆ ಎಂದು ಕಾದು ನೋಡುವೆ’’ಎಂದು ಸೆರೆನಾ ಹೇಳಿದರು.
ಉದ್ದೀಪನ ದ್ರವ್ಯ ಪರೀಕ್ಷಾ ಕಾರ್ಯಕ್ರಮಕ್ಕೆ ಮತ್ತೆ ಏಕೆ ಪ್ರವೇಶಿಸಿದ್ದೀರಿ? ಎಂದು ಕೇಳಿದಾಗ, ನಾನು ಮತ್ತೆ ಪ್ರವೇಶಿಸಿದ್ದೇನೆಯೇ, ನಾನು ಹೊರಗುಳಿದಿದ್ದೇನೆಯೇ? ಎಂದು ನನಗೆ ಗೊತ್ತಿಲ್ಲ.ನಾನು ಇದರ ಬಗ್ಗೆ ಚರ್ಚಿಸಲಾರೆ’’ ಎಂದರು.
ಸೆರೆನಾ ಅವರ ಹಿರಿಯ ಸಹೋದರಿ ವೀನಸ್ 45ನೇ ವಯಸ್ಸಿನಲ್ಲಿ ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ವೈಲ್ಡ್‌ಕಾರ್ಡ್ ಪಡೆದು ಆಡಿದರು. ಆದರೆ ಅವರು ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ್ದರು.
ಸುಮಾರು ಎರಡು ವರ್ಷಗಳ ವಿರಾಮದ ನಂತರ ಕಳೆದ ವರ್ಷದ ಜುಲೈನಲ್ಲಿ ಟೆನಿಸ್‌ಗೆ ಮರಳಿದ್ದ ವೀನಸ್ ಅವರು ಆಕ್ಲೆಂಡ್ ಹಾಗೂ ಹೊಬಾರ್ಟ್‌ನಲ್ಲಿ ನಡೆದಿದ್ದ ಪಂದ್ಯಾವಳಿಯಲ್ಲೂ ಸ್ಪರ್ಧಿಸಿದ್ದರು.