×
Ad

ಫೆ.4ರಂದು ವಾಶಿಂಗ್ಟನ್ ಸುಂದರ್‌ಗೆ ಫಿಟ್ನೆಸ್ ಟೆಸ್ಟ್?

Update: 2026-01-29 21:12 IST

 ವಾಶಿಂಗ್ಟನ್ ಸುಂದರ್‌ | Photo Credit : PTI 

ಹೊಸದಿಲ್ಲಿ, ಜ.29: ಟೀಮ್ ಇಂಡಿಯಾವು ಫೆ.7ರಂದು ತನ್ನ ಟಿ-20 ವಿಶ್ವಕಪ್ ಅಭಿಯಾನ ಆರಂಭಿಸುವ ಮೂರು ದಿನಗಳ ಮೊದಲು ಫೆ.4ರಂದು ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗುವ ಸಾಧ್ಯತೆಯಿದೆ.

ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಸುಂದರ್ ಸದ್ಯ ಪಂದ್ಯಾವಳಿಗೆ ಲಭ್ಯವಿರುವ ಕುರಿತು ಸಂಶಯ ಕಾಡುತ್ತಿದೆ. ಅವರು ತಮ್ಮ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಲು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ.

ಸುಂದರ್ ಜ.11ರಂದು ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದರು.

ಮುಂದಿನ ಯೋಜನೆಯನ್ನು ರೂಪಿಸುವ ಮೊದಲು ಟೀಮ್ ಮ್ಯಾನೇಜ್‌ಮೆಂಟ್ ಹಾಗೂ ಆಯ್ಕೆ ಸಮಿತಿಯು ಸುಂದರ್ ಅವರು ಅಧಿಕೃತ ವೈದ್ಯಕೀಯ ವರದಿಗಾಗಿ ಕಾಯಲು ಸಿದ್ಧರಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಬದಲಾವಣೆಗಳನ್ನು ಮಾಡಲು ತಂಡಗಳಿಗೆ ಜನವರಿ 30ರ ತನಕ ಅವಕಾಶವಿದೆ. ಪಂದ್ಯಾವಳಿಯ ತಾಂತ್ರಿಕ ಸಮಿತಿಯು ಅನುಮೋದಿಸಿದರೆ ಗಾಯಾಳು ಆಟಗಾರನ ಬದಲಿಗೆ ಬೇರೊಬ್ಬ ಆಟಗಾರನನ್ನು ಆಯ್ಕೆ ಮಾಡಬಹುದು.

ಫೆ.4ರಂದು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುವ ಮೊದಲು ಭಾರತೀಯ ಕ್ರಿಕೆಟ್ ತಂಡವು ಫೆ.3ರಂದು ತನ್ನ ಮೊದಲ ತರಬೇತಿಗಾಗಿ ಮುಂಬೈನಲ್ಲಿ ಒಟ್ಟು ಸೇರಲಿದೆ.

ಬುಧವಾರ ತಿಲಕ್ ವರ್ಮಾ ಹಾಗೂ ರಿಯಾನ್ ಪರಾಗ್ ಅವರು ಸಿಒಇನಲ್ಲಿ ಅಭ್ಯಾಸ ಪಂದ್ಯವನ್ನು ಆಡಿದ್ದರು. ಆದರೆ ವಾಶಿಂಗ್ಟನ್ ಸುಂದರ್ ಯಾವುದೇ ತೀವ್ರತರದ ಕಸರತ್ತುಗಳನ್ನು ಮಾಡಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News