×
Ad

3ನೇ ಸುತ್ತಿನಲ್ಲಿ ವಿಂಬಲ್ಡನ್‌ ಗೆ ಕಣ್ಣೀರಿನ ವಿದಾಯ ಕೋರಿದ ಕ್ರೆಜ್ಸಿಕೋವ

Update: 2025-07-06 23:21 IST

Photo : AFP

ಲಂಡನ್: ಹಾಲಿ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಝೆಕ್ ದೇಶದ ಬಾರ್ಬೊರಾ ಕ್ರೆಜ್ಸಿಕೋವ ಶನಿವಾರ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಅವರನ್ನು ಮೂರನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ 10ನೇ ಶ್ರೇಯಾಂಕದ ಎಮ್ಮಾ ನವರೊ 2-6, 6-3, 6-4 ಸೆಟ್‌ ಗಳಿಂದ ಸೋಲಿಸಿದರು.

ನವರೊ ಸ್ಪಷ್ಟ ಮುನ್ನಡೆ ಕಂಡುಕೊಳ್ಳುತ್ತಿರುವಂತೆಯೇ, ಪಂದ್ಯದ ಕೊನೆಯ ಘಟ್ಟಗಳಲ್ಲಿ ಗಾಯಗೊಂಡವರಂತೆ ಕಂಡುಬಂದ ಕ್ರೆಜ್ಸಿಕೋವ ಒಂದನೇ ಅಂಗಳದಲ್ಲಿ ಕಣ್ಣೀರು ಹರಿಸಿದರು.

ಮಹಿಳಾ ಸಿಂಗಲ್ಸ್ ನಲ್ಲಿ, ಅಗ್ರ ಆರು ಶ್ರೇಯಂಕಿತರ ಪೈಕಿ ಐವರು ಆಟಗಾರ್ತಿಯರು ಈಗಾಗಲೇ ನಿರ್ಗಮಿಸಿದ್ದು, ಇದು ಹೊಸ ಅನಿರೀಕ್ಷಿತ ಫಲಿತಾಂಶವಾಗಿದೆ.

29 ವರ್ಷದ ಕ್ರೆಜ್ಸಿಕೋವ ಮೊದಲ ಸುತ್ತಿನಲ್ಲಿ ಮೊದಲ ಸೆಟ್‌ ನಲ್ಲಿ ಹಿನ್ನಡೆ ಅನುಭವಿಸಿದರೂ ನಂತರದ ಸುತ್ತುಗಳಲ್ಲಿ ಪ್ರತಿ ಹೋರಾಟ ನೀಡಿ ಅಲೆಕ್ಸಾಂಡರ್ ಈಲಾರನ್ನು ಸೋಲಿಸಿದ್ದರು. ಬಳಿಕ, ಎರಡನೇ ಸುತ್ತಿನಲ್ಲಿ ಕ್ಯಾರಲೈನ್ ಡೋಲ್ಹೈಡ್ರನ್ನು ಮೂರು ಸೆಟ್‌ ಗಳಲ್ಲಿ ಏದುಸಿರು ಬಿಡುತ್ತಾ ಸೋಲಿಸಿದ್ದರು.

ಆದರೆ, ಮೂರನೇ ಸುತ್ತಿನಲ್ಲಿ ಅಂಥ ನಾಟಕೀಯ ಗೆಲುವೊಂದನ್ನು ದಾಖಲಿಸಲು ಸಾಧ್ಯವಾಗಲಿಲ್ಲ. 17ನೇ ಶ್ರೇಯಾಂಕದ ಆಟಗಾರ್ತಿಯ ದೈಹಿಕ ಕ್ಷಮತೆಯಲ್ಲಿನ ಸಮಸ್ಯೆಗಳು ಅವರ ಹಿನ್ನಡೆಗೆ ಕಾರಣಗಳಾದವು.

‘‘ನಾನು ಆತ್ಮವಿಶ್ವಾಸದಿಂದ ಆಡುತ್ತಿದ್ದೆ ಮತ್ತು ಚೆನ್ನಾಗಿದ್ದೆ. ಆದರೆ, ಒಮ್ಮೆಲೆ ನಾನು ನನ್ನ ಶಕ್ತಿಯನ್ನು ಕಳೆದುಕೊಂಡೆ ಹಾಗೂ ಬಳಿಕ ಅದನ್ನು ವಾಪಸ್ ಪಡೆಯಲು ನನಗೆ ಸಾಧ್ಯವಾಗಲಿಲ್ಲ’’ ಎಂದು ಪಂದ್ಯದ ಬಳಿಕ ಮಾತನಾಡಿದ ಕ್ರೆಜ್ಸಿಕೋವ ಹೇಳಿದರು.

►ಗಾಯದಿಂದ ಬಸವಳಿದ ಹಾಲಿ ಚಾಂಪಿಯನ್

2025ರಲ್ಲಿ ಗಾಯದಿಂದ ಬಳಲಿರುವ ಕ್ರೆಜ್ಸಿಕೋವ, ವಿಂಬಲ್ಡನ್‌ ಗೆ ಬರುವ ಮುನ್ನ ಕೇವಲ ಆರು ಪಂದ್ಯಗಳಲ್ಲಿ ಆಡಿದ್ದರು. ಎರಡು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಕ್ರೆಜ್ಸಿಕೋವ, ಕಳೆದ ವರ್ಷದ ವಿಂಬಲ್ಡನ್ ಫೈನಲ್‌ ನಲ್ಲಿ ಇಟಲಿಯ ಜಾಸ್ಮಿನ್ ಪವೊಲಿನಿಯನ್ನು ಸೋಲಿಸಿದ ಬಳಿಕ ಗಾಯದ ಸಮಸ್ಯೆಯಿಂದಾಗಿ ಸ್ಪರ್ಧಾ ಕಣಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಬೆನ್ನು ನೋವಿನಿಂದ ಬಳಲಿದ ಅವರು ಈ ವರ್ಷದ ಮೇ ತಿಂಗಳವರೆಗೂ ಸ್ಪರ್ಧಾ ಕಣದಿಂದ ಹೊರಗೆಯೇ ಇದ್ದರು. ಬಳಿಕ, ಫ್ರೆಂಚ್ ಓಪನ್ನಲ್ಲಿ ಎಡನೇ ಸುತ್ತಿನಲ್ಲೇ ಹೊರಬಿದ್ದರು.

ತೊಡೆ ನೋವಿನಿಂದಾಗಿ ಇತ್ತೀಚೆಗೆ ಈಸ್ಟ್ಬೋರ್ನ್ ಓಪನ್ ಪಂದ್ಯಾವಳಿಯಿಂದ ಕ್ವಾರ್ಟರ್ಫೈನಲ್ಗೂ ಮೊದಲೇ ಹೊರನಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News