ಏಶ್ಯಕಪ್ ಟ್ರೋಫಿಯನ್ನು ಹೊಟೇಲ್ ರೂಮಿಗೊಯ್ದ ಪಾಕ್ ಸಚಿವ ಮೊಹ್ಸಿನ್ ನಖ್ವಿ!
ಎಸಿಸಿ ಮುಖ್ಯಸ್ಥ ನಖ್ವಿ ವಿರುದ್ಧ ಐಸಿಸಿ ಸಭೆಯಲ್ಲಿ ಪ್ರತಿಭಟನೆಗೆ ಬಿಸಿಸಿಐ ಸಜ್ಜು
Photo credit: PTI
ದುಬೈ: ಏಷ್ಯಾ ಕಪ್ ಫೈನಲ್ ನಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡ ಭಾರತ ತಂಡವು, ಟ್ರೋಫಿ ವಿತರಣೆಯ ವೇಳೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಹಾಗೂ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಘಟನೆ ಅಂತರರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಭಾರತ ತಂಡ ಪಟ್ಟು ಬಿಡದೆ, ತಮ್ಮ ನಿರ್ಧಾರಕ್ಕೆ ಅಂಟಿ ನಿಂತಿದ್ದರಿಂದ, ನಕ್ವಿ ಕೂಡ ಪಟ್ಟು ಸಡಿಲಿಸಲಿಲ್ಲ. ಕೊನೆಗೆ ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ, ತಮ್ಮ ಸಿಬ್ಬಂದಿಗೆ ಪ್ರಶಸ್ತಿಯನ್ನು ತಮ್ಮ ಹೊಟೇಲ್ ಗೆ ಒಯ್ಯಲು ಹೇಳಿದರು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಿನ ನವೆಂಬರ್‌ನಲ್ಲಿ ದುಬೈನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಭೆಯಲ್ಲಿ ನಖ್ವಿ ವಿರುದ್ಧ ತೀವ್ರ ಪ್ರತಿಭಟನೆ ಸಲ್ಲಿಸಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಈ ನಿರ್ಧಾರವನ್ನು ಸಮರ್ಥಿಸಿಕೊಂಡು, “ನಮ್ಮ ದೇಶದ ವಿರುದ್ಧ ಯುದ್ಧ ನಡೆಸುತ್ತಿರುವ ವ್ಯಕ್ತಿಯಿಂದ ಭಾರತ ಪ್ರಶಸ್ತಿ ಸ್ವೀಕರಿಸುವ ಪ್ರಶ್ನೆಯೇ ಇಲ್ಲ. ಇದು ಸಂಪೂರ್ಣ ತಂಡದ ನಿರ್ಧಾರವಾಗಿತ್ತು,” ಎಂದು ಹೇಳಿದರು.
“ಟ್ರೋಫಿ ಸ್ವೀಕರಿಸದಿರುವುದರಿಂದ ಅದನ್ನು ತಮ್ಮ ಹೋಟೆಲ್‌ಗೆ ಕೊಂಡೊಯ್ದ ನಖ್ವಿಯ ನಡೆ ಅನಿರೀಕ್ಷಿತ ಹಾಗೂ ಅಪಕ್ವ. ಈ ವಿಷಯವನ್ನು ಐಸಿಸಿ ವೇದಿಕೆಯಲ್ಲಿ ನಾವು ಪ್ರಸ್ತಾಪಿಸುತ್ತೇವೆ,” ಎಂದರು.
ಫೈನಲ್‌ನಲ್ಲಿ ತಿಲಕ್ ವರ್ಮಾ ಅಜೇಯವಾಗಿ 69 ರನ್‌ಗಳನ್ನು ಗಳಿಸಿ ಪಂದ್ಯಶ್ರೇಷ್ಠರಾಗಿ ಹೊರಹೊಮ್ಮಿದರು. ಭಾರತ ಈ ಟೂರ್ನಿಯಲ್ಲಿ ಎಲ್ಲಾ ಏಳು ಪಂದ್ಯಗಳನ್ನು ಗೆದ್ದು ಅಜೇಯ ದಾಖಲೆ ನಿರ್ಮಿಸಿದೆ. ವಿಶೇಷವಾಗಿ, ಪಾಕಿಸ್ತಾನದ ವಿರುದ್ಧ ನಡೆದ ಮೂರು ಪಂದ್ಯಗಳಲ್ಲಿಯೂ ಜಯ ಸಾಧಿಸಿರುವುದು ತಂಡದ ಪ್ರಮುಖ ಸಾಧನೆಯಾಗಿದೆ.
ಪಹಲ್ಗಾಮ್ ಉಗ್ರ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಆಟ ಆಡುವ ನಿರ್ಧಾರ ವಿವಾದಕ್ಕೆ ಕಾರಣವಾಗಿದ್ದರೂ, ಈ ಬಗ್ಗೆ ಸ್ಪಷ್ಟನೆ ನೀಡಿಧ ಸೈಕಿಯಾ, “ಭಾರತ ಸರ್ಕಾರದ ಮಾರ್ಗಸೂಚಿಯಂತೆ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸುವುದು ಕಡ್ಡಾಯ. ಇಲ್ಲದಿದ್ದರೆ ಅಂತರರಾಷ್ಟ್ರೀಯ ಒಕ್ಕೂಟಗಳಿಂದ ನಿರ್ಬಂಧ ಎದುರಿಸಬೇಕಾಗುತ್ತದೆ. ಆದರೆ ದ್ವಿಪಕ್ಷೀಯ ಸರಣಿಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಡುತ್ತಿಲ್ಲ,” ಎಂದು ತಿಳಿಸಿದರು.
“ಪಾಕಿಸ್ತಾನದ ವಿರುದ್ಧ 3–0 ಅಂತರದ ಅದ್ಭುತ ಗೆಲುವು ದೇಶದ ಜನತೆಗೆ ಅಪಾರ ಸಂತೋಷ ತಂದಿದೆ. ತಂಡದ ಸಾಧನೆಯ ಬಗ್ಗೆ ಭಾರತ ಹೆಮ್ಮೆಪಡುತ್ತದೆ,” ಎಂದು ಸೈಕಿಯಾ ಹೇಳಿದರು.