ಮರಾಠಾ ಕೋಟಾ | ಕೊನೆಯ ಹೋರಾಟವಾಗಿ ‘ಚಲೋ ಮುಂಬೈ’ ಕರೆ ನೀಡಿದ ಜಾರಂಗೆ
Update: 2025-08-24 21:15 IST
ಮನೋಜ ಜಾರಂ | PC : ANI
ಛತ್ರಪತಿ ಸಂಭಾಜಿನಗರ,ಆ.24: ಆ.27ರಂದು ಆರಂಭಗೊಳ್ಳಲಿರುವ ತನ್ನ ‘ಚಲೋ ಮುಂಬೈ’ ಜಾಥಾದಲ್ಲಿ ಪಾಲ್ಗೊಳ್ಳುವಂತೆ ಮಹಾರಾಷ್ಟ್ರದ ಮರಾಠಾ ಸಮುದಾಯವನ್ನು ರವಿವಾರ ಆಗ್ರಹಿಸಿದ ಸಾಮಾಜಿಕ ಹೋರಾಟಗಾರ ಮನೋಜ ಜಾರಂಗೆ ಅವರು, ಇದು ಮೀಸಲಾತಿಗಾಗಿ ಕೊನೆಯ ಹೋರಾಟವಾಗಿದೆ ಎಂದು ಬಣ್ಣಿಸಿದರು.
ಬೀಡ್ ಜಿಲ್ಲೆಯ ಮುಂಜರಸುಂಬಾದಲ್ಲಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಜಾರಂಗೆ,‘ಭಾರೀ ಸಂಖ್ಯೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯು ಸರಕಾರಕ್ಕೆ ಆತಂಕವನ್ನುಂಟು ಮಾಡಬೇಕು. ಹಾಗಾಗದಿದ್ದರೂ ನಾವು ಮುಂಬೈ ತಲುಪಿದ ಬಳಿಕ ಅದು ನಿಜವಾದ ಒತ್ತಡವನ್ನು ಅನುಭವಿಸಲಿದೆ. ಹೋರಾಟವು ಈಗ ಮುಂಬೈಗೆ ಸ್ಥಳಾಂತರಗೊಳ್ಳಲಿದೆ’ ಎಂದು ಹೇಳಿದರು.
ಒಬಿಸಿ ವರ್ಗದಡಿ ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಆ.29ರಿಂದ ಮುಂಬೈನ ಆಝಾದ್ ಮೈದಾನದಲ್ಲಿ ಪ್ರತಿಭಟನೆಗೂ ಕರೆ ನೀಡಿದ ಅವರು,‘ನಾವು ಮರಾಠಾ ಮೀಸಲಾತಿಯಿಲ್ಲದೆ ಮರಳುವುದಿಲ್ಲ’ ಎಂದು ಘೋಷಿಸಿದರು.