ಟಿವಿ ಅಂಪೈರ್ ಗೆ ಟೀಕೆ: ವೆಸ್ಟ್ ಇಂಡೀಸ್ ಕೋಚ್ ಗೆ ದಂಡ
Photo : PTI
ಬ್ರಿಜ್ಟೌನ್: ಬಾರ್ಬಡೋಸ್ನ ಬ್ರಿಜ್ಟೌನ್ ನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ವೇಳೆ ಟಿವಿ ಅಂಪಯರ್ ಆ್ಯಡ್ರಿಯನ್ ಹೋಲ್ಡ್ ಸ್ಟಾಕ್ ರನ್ನು ಬಹಿರಂಗವಾಗಿ ಟೀಕಿಸಿರುವುದಕ್ಕಾಗಿ ವೆಸ್ಟ್ ಇಂಡೀಸ್ ಕೋಚ್ ಡ್ಯಾರನ್ ಸ್ಯಾಮಿಗೆ ಅವರ ಪಂದ್ಯಶುಲ್ಕದ 15 ಶೇಕಡ ದಂಡ ವಿಧಿಸಲಾಗಿದೆ.
ಪಂದ್ಯದ ಎರಡನೇ ದಿನದ ಆಟದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಟಿವಿ ಅಂಪಯರ್ ಅವರನ್ನು ಸ್ಯಾಮಿ ಟೀಕಿಸಿದ್ದರು. ಪಂದ್ಯವು ಸರಣಿ ವಿವಾದಾಸ್ಪದ ತೀರ್ಪುಗಳಿಗೆ ಸಾಕ್ಷಿಯಾದ ಹಿನ್ನೆಲೆಯಲ್ಲಿ, ನಿರ್ಧಾರ ಮರುಪರಿಶೀಲನೆ (ಡಿ ಆರ್ ಎಸ್) ತೀರ್ಪುಗಳಲ್ಲಿ ಏಕರೂಪತೆ ಇರಬೇಕು ಎಂಬುದಾಗಿ ಅವರು ಹೇಳಿದ್ದರು.
ಎರಡು ವಿಕೆಟ್ ಹಿಂದುಗಡೆಯ ಕ್ಯಾಚ್ ಗಳನ್ನು ತೃತೀಯ ಅಂಪೈರ್ ತೀರ್ಪಿಗೆ ವಹಿಸಲಾಗಿತ್ತು. ಒಂದು ಪ್ರಕರಣದಲ್ಲಿ ಆಸ್ಟ್ರೇಲಿಯದ ಬ್ಯಾಟರ್ ಟ್ರಾವಿಸ್ ಹೆಡ್ ಔಟಲ್ಲ ಎಂಬ ತೀರ್ಪು ಬಂದರೆ, ಇನ್ನೊಂದು ಪ್ರಕರಣದಲ್ಲಿ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಬ್ಯಾಟರ್ ಶಾಯಿ ಹೋಪ್ ರನ್ನು ಔಟ್ ಎಂಬುದಾಗಿ ತಿಳಿಸಲಾಗಿತ್ತು. ಈ ತೀರ್ಪಿನ ಬಗ್ಗೆ ಕೋಚ್ ಸ್ಯಾಮಿ ಹತಾಶೆ ವ್ಯಕ್ತಪಡಿಸಿದ್ದರು.
ವೆಸ್ಟ್ ಇಂಡೀಸ್ ನಾಯಕ ರೋಸ್ಟನ್ ಚೇಸ್ ಮತ್ತು ಆಸ್ಟ್ರೇಲಿಯದ ಕ್ಯಾಮರೂನ್ ಗ್ರೀನ್ ರನ್ನು ಒಳಗೊಂಡ ಎರಡು ಲೆಗ್ ಬಿಫೋರ್ ವಿಕೆಟ್ (ಎಲ್ಬಿಡಬ್ಲ್ಯು) ತೀರ್ಪುಗಳ ಬಗ್ಗೆಯೂ ವೆಸ್ಟ್ ಇಂಡೀಸ್ ಕೋಚ್ ಅತೃಪ್ತಿ ವ್ಯಕ್ತಪಡಿಸಿದ್ದರು.
‘‘ಅನುಮಾನ ಇರುವಾಗ, ಉದ್ದಕ್ಕೂ ಒಂದೇ ಮಾನದಂಡವನ್ನು ಅನುಸರಿಸಿ’’ ಎಂದು ಅವರು ಹೇಳಿದ್ದರು.