×
Ad

ಟೆನಿಸ್ ಗೆ ವಿದಾಯ ಕೋರಿದ ಫೇಬಿಯೊ ಫಾಗ್ನಿನಿ

Update: 2025-07-09 22:09 IST

ಫೇಬಿಯೊ ಫಾಗ್ನಿನಿ | PC : X 

ಲಂಡನ್: ಇಟಲಿಯ ಟೆನಿಸ್ ಆಟಗಾರ ಫೇಬಿಯೊ ಫಾಗ್ನಿನಿ ಬುಧವಾರ ವಿಂಬಲ್ಡನ್ ನಲ್ಲಿ ತನ್ನ ಕ್ರೀಡಾ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಮುಂದಿನ 12 ತಿಂಗಳುಗಳಲ್ಲಿ ನಿವೃತ್ತಿಯಾಗಲು ಯೋಚಿಸಿದ್ದೇನೆ ಎಂಬುದಾಗಿ 38 ವರ್ಷದ ಫಾಗ್ನಿನಿ ಅವರು ರೋಮ್ ಮಾಸ್ಟರ್ಸ್ ಪಂದ್ಯಾವಳಿಗೆ ಮುಂಚಿತವಾಗಿ ಮೇ ತಿಂಗಳಲ್ಲಿ ಹೇಳಿದ್ದರು.

ಈಗ ಅವರು ತನ್ನ ನಿವೃತ್ತಿ ಯೋಜನೆಯನ್ನು ಹಿಂದೂಡಿದ್ದಾರೆ. ವಿಂಬಲ್ಡನ್ ನಲ್ಲಿ ಕಳೆದ ವಾರ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಝ್ ವಿರುದ್ಧ ನಡೆದ ಮೊದಲ ಸುತ್ತಿನ ಪಂದ್ಯ ಅವರ ಕೊನೆಯ ಪಂದ್ಯವಾಯಿತು. ಆ ಪಂದ್ಯದಲ್ಲಿ ಅವರು 5 ಸೆಟ್ಗಳಿಂದ ಸೋತಿದ್ದಾರೆ.

‘‘ಇಂದಿನದು ಅಧಿಕೃತ. ಪ್ರತಿಯೊಬ್ಬರಿಗೂ ನಾನು ವಿದಾಯ ಕೋರುತ್ತಿದ್ದೇನೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಫಾಗ್ನಿನಿ ಹೇಳಿದರು.

2019ರಲ್ಲಿ ಗಳಿಸಿದ 9ನೇ ಸ್ಥಾನವು ಎಟಿಪಿ ರ‍್ಯಾಂಕಿಂಗ್ಸ್ನಲ್ಲಿ ಅವರ ಗರಿಷ್ಠ ರ‍್ಯಾಂಕಿಂಗ್ ಆಗಿದೆ. ಅವರು 9 ಎಟಿಪಿ ಟೂರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ತನ್ನ ಏಕೈಕ ಮಾಸ್ಟರ್ಸ್-1000 ಪ್ರಶಸ್ತಿಯನ್ನು 2019ರಲ್ಲಿ ಮಾಂಟೆ ಕಾರ್ಲೊದಲ್ಲಿ ಗೆದ್ದಿದ್ದಾರೆ. 2015ರಲ್ಲಿ ಯು.ಎಸ್. ಓಪನ್ನಲ್ಲಿ ರಫೆಲ್ ನಡಾಲ್ ವಿರುದ್ಧ ಪ್ರತಿ ಹೋರಾಟ ನೀಡಿ 5 ಸೆಟ್ಗಳ ಜಯ ಸಾಧಿಸಿರುವುದು ಅವರ ಸ್ಮರಣೀಯ ಕ್ಷಣವಾಗಿದೆ. 2017ರಲ್ಲಿ ಅಂದಿನ ವಿಶ್ವದ ನಂಬರ್ ವನ್ ಆ್ಯಂಡಿ ಮರ್ರೆಯನ್ನು ರೋಮ್ ಮಾಸ್ಟರ್ಸ್ ನಲ್ಲಿ ಸೋಲಿಸಿದ್ದಾರೆ.

ಫಾಗ್ನಿನಿ ಮೈದಾನದಲ್ಲಿ ಅಶಿಸ್ತಿನ ವರ್ತನೆಗಳಿಗೂ ಪ್ರಸಿದ್ಧರಾಗಿದ್ದಾರೆ. ‘‘ವಿಂಬಲ್ಡನ್ ಕ್ಲಬ್ ನಲ್ಲಿ ಬಾಂಬ್ ಸ್ಫೋಟಿಸಬೇಕು ಎಂಬುದಾಗಿ ನಾನು ಆಶಿಸುತ್ತೇನೆ’’ ಎಂಬುದಾಗಿ ಅವರು 2019ರಲ್ಲಿ ಅಲ್ಲಿಯೇ ಹೇಳಿದ್ದರು. ಅದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿತ್ತು.

ಅದಕ್ಕೂ ಮೊದಲು, 2017ರಲ್ಲಿ ಯು.ಎಸ್. ಓಪನ್ ಪಂದ್ಯಾವಳಿಯ ವೇಳೆ ಮಹಿಳಾ ಅಂಪೈರ್ಗೆ ಅವಮಾನ ಮಾಡಿದ ಆರೋಪದಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು. 2014ರಲ್ಲಿ ವಿಂಬಲ್ಡನ್ನಲ್ಲಿ ಕ್ರೀಡಾಪಟುಗಳಿಗೆ ಉಚಿತವಲ್ಲದ ವರ್ತನೆ ತೋರಿರುವುದಕ್ಕಾಗಿ ಅವರಿಗೆ 27,500 ಡಾಲರ್ (ಸುಮಾರು 23.57 ಲಕ್ಷ ರೂ.) ದಂಡ ವಿಧಿಸಲಾಗಿತ್ತು.

2011ರ ಫ್ರೆಂಚ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿರುವುದು ಅವರ ಶ್ರೇಷ್ಠ ಗ್ರ್ಯಾನ್ ಸ್ಲಾಮ್ ನಿರ್ವಹಣೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News