ಮೊದಲ ಟೆಸ್ಟ್ | ವಿಂಡೀಸ್‌ಗೆ ಸೋಲುಣಿಸಿದ ಇಂಗ್ಲೆಂಡ್, ಆ್ಯಂಡರ್ಸನ್ ಸ್ಮರಣೀಯ ವಿದಾಯ
ಜೇಮ್ಸ್ ಆ್ಯಂಡರ್ಸನ್ | PC : NDTV
ಲಾರ್ಡ್ಸ್ : ಚೊಚ್ಚಲ ಪಂದ್ಯವನ್ನಾಡಿದ ಗಸ್ ಅಟ್ಕಿನ್ಸನ್(12-106)ಅವರ ಅತ್ಯುತ್ತಮ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ಇಂಗ್ಲೆಂಡ್ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ತಂಡವನ್ನು ಮೊದಲ ಟೆಸ್ಟ್ನ ಮೂರನೇ ದಿನದಾಟವಾದ ಶುಕ್ರವಾರ ಇನಿಂಗ್ಸ್ ಹಾಗೂ 114 ರನ್ ಅಂತರದಿಂದ ಮಣಿಸಿದೆ. ಈ ಮೂಲಕ ವಿದಾಯದ ಪಂದ್ಯವನ್ನಾಡಿದ ಹಿರಿಯ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್‌ಗೆ ಗೆಲುವಿನ ಉಡುಗೊರೆ ನೀಡಿದೆ.
ಮೂರನೇ ದಿನವಾದ ಶನಿವಾರ 171 ರನ್ ಹಿನ್ನಡೆಯೊಂದಿಗೆ 6 ವಿಕೆಟ್ಗಳ ನಷ್ಟಕ್ಕೆ 79 ರನ್‌ನಿಂದ 2ನೇ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಪರ ಕೆಳ ಕ್ರಮಾಂಕದಲ್ಲಿ ಗುಡಕೇಶ್ ಮೊಟೀ(ಔಟಾಗದೆ 31, 35 ಎಸೆತ) ಏಕಾಂಗಿ ಹೋರಾಟ ನೀಡಿದರು.
ಮೊದಲ ಇನಿಂಗ್ಸ್ ನಲ್ಲಿ ಏಳು ವಿಕೆಟ್‌ಗಳನ್ನು ಉರುಳಿಸಿದ್ದ ಅಟ್ಕಿನ್ಸನ್ ಎರಡನೇ ಇನಿಂಗ್ಸ್ ನಲ್ಲಿ ಐದು ವಿಕೆಟ್ ಗೊಂಚಲು ಪಡೆದು ವೆಸ್ಟ್‌ಇಂಡೀಸ್ ತಂಡವನ್ನು ಕೇವಲ 136 ರನ್‌ಗೆ ನಿಯಂತ್ರಿಸಲು ನೆರವಾದರು. ಅಟ್ಕಿನ್ಸನ್‌ಗೆ ಜೇಮ್ಸ್ ಆ್ಯಂಡರ್ಸನ್(3-32) ಹಾಗೂ ಬೆನ್ ಸ್ಟೋಕ್ಸ್(2-25)ಸಾಥ್ ನೀಡಿದರು.
ಪಂದ್ಯದಲ್ಲಿ 106 ರನ್ ನೀಡಿ ಒಟ್ಟು 12 ವಿಕೆಟ್‌ಗಳನ್ನು ಕಬಳಿಸಿರುವ ಅಟ್ಕಿನ್ಸನ್ 1890ರ ನಂತರ ಚೊಚ್ಚಲ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಮೊದಲ ಇಂಗ್ಲೆಂಡ್ ಬೌಲರ್ ಎನಿಸಿಕೊಂಡರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಚೊಚ್ಚಲ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಇಂಗ್ಲೆಂಡ್ನ 8ನೇ ಆಟಗಾರ ಎನಿಸಿಕೊಂಡರು. 2018ರಲ್ಲಿ ಶ್ರೀಲಂಕಾದ ವಿರುದ್ಧ ಬೆನ್ ಫೋಕ್ಸ್ ಕೊನೆಯ ಬಾರಿ ಈ ಸಾಧನೆ ಮಾಡಿದ ಇಂಗ್ಲೆಂಡ್ ಆಟಗಾರನಾಗಿದ್ದಾರೆ.
ಅಟ್ಕಿನ್ಸನ್ ಲಾರ್ಡ್ಸ್ ನಲ್ಲಿ ಚೊಚ್ಚಲ ಪಂದ್ಯದಲ್ಲಿ 4ನೇ ಶ್ರೇಷ್ಠ ಪ್ರದರ್ಶನ ನೀಡಿದರು. ನರೇಂದ್ರ ಹಿರ್ವಾನಿ ಹಾಗೂ ಬಾಬ್ ಮಸ್ಸಿ ತಮ್ಮ ಮೊದಲ ಪಂದ್ಯದಲ್ಲಿ ತಲಾ 16 ವಿಕೆಟ್‌ಗಳನ್ನು ಪಡೆದಿದ್ದರು. 1890ರಲ್ಲಿ ಇಂಗ್ಲೆಂಡ್ನ ಫ್ರೆಡ್ ಮಾರ್ಟಿನ್ ಆಸ್ಟ್ರೇಲಿಯ ವಿರುದ್ಧ 102 ರನ್‌ಗೆ 12 ವಿಕೆಟ್‌ಗಳನ್ನು ಪಡೆದಿದ್ದರು.
ಅಟ್ಕಿನ್ಸನ್‌ಗಿಂತ ಮೊದಲು 1974ರಲ್ಲಿ ಇಂಗ್ಲೆಂಡ್ ಬೌಲರ್ ಸ್ವದೇಶದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 12 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದರು. ಡರೆಕ್ ಅಂಡರ್‌ವುಡ್ ಲಾರ್ಡ್ಸ್ ನಲ್ಲಿ ಪಾಕಿಸ್ತಾನದ ವಿರುದ್ಧ 71 ರನ್‌ಗೆ 13 ವಿಕೆಟ್‌ಗಳನ್ನು ಉರುಳಿಸಿದ್ದರು.
ಹಿರಿಯ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರ ವಿದಾಯವು ಪಂದ್ಯದ ಮುಖ್ಯಾಂಶವಾಗಿತ್ತು. ಆ್ಯಂಡರ್ಸನ್ ತನ್ನ 21 ವರ್ಷಗಳ ಟೆಸ್ಟ್ ವೃತ್ತಿಜೀವನಕ್ಕೆ ತೆರೆ ಎಳೆದರು. ತನ್ನ ಕೊನೆಯ ಹಾಗೂ 188ನೇ ಪಂದ್ಯದಲ್ಲಿ ಅವರು ಒಟ್ಟು 4 ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 704 ವಿಕೆಟ್‌ಗಳನ್ನು ಪಡೆದರು. ಕ್ರಿಕೆಟ್ ಇತಿಹಾಸದಲ್ಲಿ 700ಕ್ಕೂ ಅಧಿಕ ವಿಕೆಟ್ ಪಡೆದ ಏಕೈಕ ವೇಗದ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಟಾಸ್ ಜಯಿಸಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ವೆಸ್ಟ್ ಇಂಡೀಸ್ ಅನ್ನು ಬ್ಯಾಟಿಂಗ್‌ಗೆ ಇಳಿಸಿದ್ದರು. ವಿಂಡೀಸ್ ಮೊದಲ ಇನಿಂಗ್ಸ್‌ನಲ್ಲಿ ಕೇವಲ 121 ರನ್‌ಗೆ ಆಲೌಟಾಯಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್ ನಲ್ಲಿ 371 ರನ್ ಗಳಿಸಿತು. 250 ರನ್ ಇನಿಂಗ್ಸ್ ಮುನ್ನಡೆ ಪಡೆಯಿತು.
2ನೇ ಇನಿಂಗ್ಸ್‌ನಲ್ಲೂ ಕಳಪೆ ಬ್ಯಾಟಿಂಗ್ ಮುಂದುವರಿಸಿದ ವಿಂಡೀಸ್ 47 ಓವರ್‌ಗಳಲ್ಲಿ ಕೇವಲ 136 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
3 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಜುಲೈ 26ರಿಂದ ಬರ್ಮಿಂಗ್‌ಹ್ಯಾಮ್ ನಲ್ಲಿ ಆರಂಭವಾಗಲಿದೆ.