ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಮೆಂಟ್ ; ಫ್ರಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ಶುಭಾರಂಭ
ಹೊಸದಿಲ್ಲಿ: ಹರ್ಮನ್ಪ್ರೀತ್ ಸಿಂಗ್ ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತೀಯ ಪುರುಷರ ಹಾಕಿ ತಂಡವು ಫ್ರಾನ್ಸ್ ತಂಡವನ್ನು 4-0 ಗೋಲುಗಳ ಅಂತರದಿಂದ ಸೋಲಿಸಿ ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಮೆಂಟ್ ನಲ್ಲಿ ಶುಭಾರಂಭ ಮಾಡಿದೆ.
ಸೋಮವಾರ ಭಾರತ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಹರ್ಮನ್ಪ್ರೀತ್ ಸಿಂಗ್ 13ನೇ ಹಾಗೂ 26ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಲಲಿತ್ ಉಪಾಧ್ಯಾಯ(42ನೇ ನಿಮಿಷ) ಹಾಗೂ ಉಪ ನಾಯಕ ಹಾರ್ದಿಕ್ ಸಿಂಗ್(49ನೇ ನಿಮಿಷ)ಭಾರತದ ಖಾತೆಗೆ ತಲಾ ಒಂದು ಗೋಲು ಜಮೆ ಮಾಡಿದರು.
ಹರ್ಮನ್ಪ್ರೀತ್ ಶಕ್ತಿಶಾಲಿ ಡ್ರ್ಯಾಗ್ಫ್ಲಿಕ್ ನ ಮೂಲಕ ಭಾರತವು ಮೊದಲ ಕ್ವಾರ್ಟರ್ನಲ್ಲಿ ಮೊದಲ ಗೋಲು ಗಳಿಸಿತು. ಎರಡನೇ ಕ್ವಾರ್ಟರ್ನಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿದರು.
ಲಲಿತ್ ಭಾರತದ ಮುನ್ನಡೆಯನ್ನು 3-0ಗೆ ವಿಸ್ತರಿಸಿದರು. ಕೊನೆಯ ಕ್ವಾರ್ಟರ್ನಲ್ಲಿ ಫೀಲ್ಡ್ ಗೋಲು ಗಳಿಸಿದ ಹಾರ್ದಿಕ್ ತಂಡದ ಮುನ್ನಡೆಯನ್ನು 4-0ಗೆ ಹೆಚ್ಚಿಸಿ ಫ್ರಾನ್ಸ್ ತಂಡವನ್ನು ಹಿಮ್ಮೆಟ್ಟಿಸಿದರು.
ಒಂದು ವಾರ ನಡೆಯಲಿರುವ ಟೂರ್ನಮೆಂಟ್ ನಲ್ಲಿ ಫ್ರಾನ್ಸ್, ನೆದರ್ಲ್ಯಾಂಡ್ಸ್, ಭಾರತ ಹಾಗೂ ಆತಿಥೇಯ ದಕ್ಷಿಣ ಆಫ್ರಿಕಾ ತಂಡಗಳು ಭಾಗವಹಿಸಲಿವೆ.
ಭಾರತವು ಬುಧವಾರ ತನ್ನ ಎರಡನೇ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಮತ್ತೊಮ್ಮೆ ಮುಖಾಮುಖಿಯಾಗಲಿದೆ. ಆ ನಂತರ ಶುಕ್ರವಾರ ಆತಿಥೇಯ ದಕ್ಷಿಣ ಆಫ್ರಿಕಾ ಹಾಗೂ ರವಿವಾರ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.