×
Ad

ಹ್ಯಾಂಡ್‌ಶೇಕ್ ವಿವಾದ | ಪಾಕಿಸ್ತಾನ ತಂಡ ಏಶ್ಯ ಕಪ್‌ ನಿಂದ ಹೊರಗುಳಿಯವ ಸಾಧ್ಯತೆ ಇಲ್ಲ: ವರದಿ

Update: 2025-09-16 20:53 IST

PC : PTI 

ದುಬೈ, ಸೆ.16: ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ರವಿವಾರ ರಾತ್ರಿ ಏಶ್ಯ ಕಪ್ ಪಂದ್ಯದ ನಂತರ ಭಾರತೀಯ ಕ್ರಿಕೆಟಿಗರು ಎದುರಾಳಿ ಪಾಕಿಸ್ತಾನದ ಆಟಗಾರರ ಕೈಕುಲುಕಲು ನಿರಾಕರಿಸಿದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದ್ದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ)ಈಗ ನಡೆಯುತ್ತಿರುವ ಏಶ್ಯ ಕಪ್ ಟೂರ್ನಿಯಿಂದ ಪಾಕಿಸ್ತಾನ ತಂಡವನ್ನು ಹಿಂದಕ್ಕೆ ಕರೆಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ‘ಟೈಮ್ಸ್‌ ಆಫ್‌ ಇಂಡಿಯಾ’ ವರದಿ ಮಾಡಿದೆ.

ಪಾಕಿಸ್ತಾನ ಕ್ರಿಕೆಟ್ ತಂಡವು ಏಶ್ಯ ಕಪ್ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯು ತುಂಬಾ ಕಡಿಮೆ ಎಂದು ಪಿಸಿಬಿ ಮೂಲಗಳು ‘ಟೈಮ್ಸ್‌ ಆಫ್‌ ಇಂಡಿಯಾ’ಗೆ ತಿಳಿಸಿದೆ.

‘‘ನಾವು ಹಾಗೆ ಮಾಡಿದರೆ ಜಯ್ ಶಾ ಅಧ್ಯಕ್ಷತೆಯ ಐಸಿಸಿ, ಪಿಸಿಬಿ ಮೇಲೆ ಭಾರೀ ನಿರ್ಬಂಧಗಳನ್ನು ವಿಧಿಸುತ್ತದೆ. ಇದು ನಮ್ಮ ಮಂಡಳಿಗೆ ಭರಿಸಲಾಗದ ವಿಷಯ. ಚಾಂಪಿಯನ್ಸ್ ಟ್ರೋಫಿಯ ನಂತರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ, ಚಾಂಪಿಯನ್ಸ್ ಟೋಫಿಗಾಗಿ ಪಾಕಿಸ್ತಾನದ ಎಲ್ಲ ಸ್ಟೇಡಿಯಂಗಳನ್ನು ನವೀಕರಿಸಲಾಗಿದ್ದು, ಸಾಕಷ್ಟು ಹಣ ಖರ್ಚಾಗಿದೆ’’ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

‘‘ನನ್ನ ದೇಶದ ಗೌರವ ಹಾಗೂ ಪ್ರತಿಷ್ಠೆಗಿಂತ ನನಗೆ ಮುಖ್ಯವಾದುದು ಯಾವುದೂ ಇಲ್ಲ’’ ಎಂದು ಪಿಸಿಬಿ ಅಧ್ಯಕ್ಷ ಹಾಗೂ ಪ್ರಸ್ತುತ ಏಶ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮುಹ್ಸಿನ್ ನಖ್ವಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಮರುದಿನ ಈ ಬೆಳವಣಿಗೆ ನಡೆದಿದೆ.

ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಹಾಗೂ ಭಾರತದ ನಾಯಕ ಸೂರ್ಯಕುಮಾರ್‌ ಗೆ ಟಾಸ್ ಸಮಯದಲ್ಲಿ ಸಾಂಪ್ರದಾಯಿಕ ಹ್ಯಾಂಡ್‌ ಶೇಕ್ ಮಾಡಬಾರದು ಎಂದು ಹೇಳಿದ್ದ ಮ್ಯಾಚ್ ರೆಫರಿ ಆ್ಯಂಡ್ರೂ ಪೈಕ್ರಾಫ್ಟ್ ವಿರುದ್ಧ ಐಸಿಸಿಗೆ ಪಿಸಿಬಿ ದೂರು ನೀಡಿತ್ತು.

ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಮಂಗಳವಾರ ಐಸಿಸಿ ಅಕಾಡೆಮಿಯಲ್ಲಿ ತರಬೇತಿ ನಡೆಸಲಿವೆ. ಬೇರೆ ಬೇರೆ ಸಮಯದಲ್ಲಿ ಅಭ್ಯಾಸ ನಡೆಸಲಿರುವ ಉಭಯ ತಂಡಗಳು ತಮ್ಮ ಮುಂದಿನ ಪಂದ್ಯಗಳಿಗೆ ತಯಾರಿ ನಡೆಸಲು ಒಂದೇ ಸ್ಥಳದಲ್ಲಿರುತ್ತವೆ.

ಭಾರತ ತಂಡವು ಸಂಜೆ 6ರಿಂದ ರಾತ್ರಿ 9ರ ತನಕ(ಸ್ಥಳೀಯ ಸಮಯ)ಅಭ್ಯಾಸ ನಡೆಸಿದರೆ, ಪಾಕಿಸ್ತಾನ ತಂಡ ರಾತ್ರಿ 8ರಿಂದ 11ರ ತನಕ (ಸ್ಥಳೀಯ ಸಮಯ)ತರಬೇತಿ ನಡೆಸಲಿದೆ.

ಸೋಮವಾರ ಯುಎಇ ತಂಡವು ಒಮಾನ್ ತಂಡದ ವಿರುದ್ದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭಾರತ ತಂಡವು ಸೂಪರ್-4 ಹಂತಕ್ಕೆ ತೇರ್ಗಡೆಯಾಗಿದೆ. ಇದೇ ವೇಳೆ, ಪಾಕಿಸ್ತಾನ ತಂಡವು ಬುಧವಾರ ಆತಿಥೇಯ ಯುಎಇ ತಂಡದ ವಿರುದ್ಧ ಮಾಡು-ಇಲ್ಲವೇ ಮಡಿ ಪಂದ್ಯವನ್ನು ಆಡಲಿದೆ. ಒಂದು ವೇಳೆ ಪಾಕಿಸ್ತಾನ ತಂಡವು ಯುಎಇ ತಂಡವನ್ನು ಮಣಿಸಿದರೆ, ರವಿವಾರ ಮತ್ತೊಮ್ಮೆ ಭಾರತ ತಂಡವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News