ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ | ನಾಯಕ ಗಿಲ್ ಶತಕ; 518 ರನ್ ಗಳಿಗೆ ಡಿಕ್ಲೇರ್ ಘೋಷಿಸಿದ ಭಾರತ
ರೋಹಿತ್ ಶರ್ಮಾ ದಾಖಲೆ ಮುರಿದ ಗಿಲ್
ಶುಭಮನ್ ಗಿಲ್ (Photo: X/BCCI)
ಹೊಸದಿಲ್ಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಹತ್ತನೆಯ ಶತಕ ದಾಖಲಿಸಿರುವ ಭಾರತ ತಂಡದ ನಾಯಕ ಶುಭಮನ್ ಗಿಲ್, ಆ ಮೂಲಕ ಹೊಸದೊಂದು ದಾಖಲೆಗೆ ಭಾಜನರಾಗಿದ್ದಾರೆ. ಇದೇ ವೇಳೆ ನಾಯಕನಾಗಿ ಐದನೆಯ ಟೆಸ್ಟ್ ಶತಕ ಬಾರಿಸಿದ 26 ವರ್ಷದ ಶುಭಮನ್ ಗಿಲ್, ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾರ ದಾಖಲೆಯನ್ನು ಹಿಂದಿಕ್ಕಿ, ಭಾರತ ತಂಡದ ಮತ್ತೊಬ್ಬ ಮಾಜಿ ನಾಯಕ ಎಂ.ಎಸ್.ಧೋನಿಯ ದಾಖಲೆಯನ್ನು ಸರಿಗಟ್ಟಿದ್ದಾರೆ.
ಭಾರತ ತಂಡದ ನಾಯಕರಾಗಿ ಇಂಗ್ಲೆಂಡ್ ವಿರುದ್ಧದ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಚೊಚ್ಚಲ ಸರಣಿಯಲ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದ ಶುಭಮನ್ ಗಿಲ್, ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ನಲ್ಲಿ ತಮ್ಮ ಐದನೆಯ ಶತಕ ಬಾರಿಸಿದರು. ಆ ಮೂಲಕ, ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡದ ನಾಯಕರಾಗಿ ಅತಿ ಹೆಚ್ಚು (5) ಶತಕಗಳನ್ನು ಗಳಿಸಿದ್ದ ಎಂ.ಎಸ್.ಧೋನಿಯ ದಾಖಲೆಯನ್ನು ಸರಿಗಟ್ಟಿದರು.
ದ್ವಿತೀಯ ಟೆಸ್ಟ್ ನ ಎರಡನೇ ದಿನವಾದ ಇಂದು ಆಟ ಮುಂದುವರಿಸಿದ ಭಾರತ ತಂಡ, ಯಶಸ್ವಿ ಜೈಸ್ವಾಲ್ (175) ಅನ್ನು ಬಹುಬೇಗ ಕಳೆದುಕೊಂಡರೂ, ನಾಯಕ ಶುಭಮನ್ ಗಿಲ್ (ಅಜೇಯ 129), ಸಾಯಿ ಸುದರ್ಶನ್ (87) ಹಾಗೂ ನಿತೀಶ್ ಕುಮಾರ್ ರೆಡ್ಡಿ (43) ಅವರ ಉಪಯುಕ್ತ ಕೊಡುಗೆಗಳಿಂದ 5 ವಿಕೆಟ್ ನಷ್ಟಕ್ಕೆ 518 ರನ್ ಗಳ ಬೃಹತ್ ಮೊತ್ತ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಇತ್ತೀಚಿನ ವರದಿಗಳ ಪ್ರಕಾರ, ಪ್ರಥಮ ಇನಿಂಗ್ಸ್ ಪ್ರಾರಂಭಿಸಿರುವ ವೆಸ್ಟ್ ಇಂಡೀಸ್ ತಂಡ, ಆರಂಭಿಕ ಬ್ಯಾಟರ್ ಜಾನ್ ಕ್ಯಾಂಪ್ಬೆಲ್ (10) ವಿಕೆಟ್ ಕಳೆದುಕೊಂಡು, ಒಂದು ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿದೆ. 12 ರನ್ ಗಳಿಸಿರುವ ಟಗೆನರೈನ್ ಚಂದ್ರಪಾಲ್ ಹಾಗೂ ಒಂದು ರನ್ ಗಳಿಸಿರುವ ಅಲಿಕ್ ಅತನೇಜ್ ಕ್ರೀಸಿನಲ್ಲಿದ್ದಾರೆ.