×
Ad

ಭಾರತದ ಮಡಿಲಿಗೆ ಹಾಕಿ ಏಶ್ಯ ಕಪ್

ದಕ್ಷಿಣ ಕೊರಿಯಕ್ಕೆ 4-1 ಅಂತರದ ಸೋಲು

Update: 2025-09-07 22:55 IST

Courtesy: Hockey India

ರಾಜ್ಗಿರ್ (ಬಿಹಾರ), ಸೆ. 7: ಭಾರತವು ಏಶ್ಯ ಕಪ್ 2025 ಹಾಕಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದಿದೆ. ರವಿವಾರ ಬಿಹಾರದ ರಾಜ್ಗಿರ್ನಲ್ಲಿರುವ ಬಿಹಾರ ಸ್ಪೋರ್ಟ್ಸ್ ಯುನಿವರ್ಸಿಟಿ ಹಾಕಿ ಸ್ಟೇಡಿಯಮ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತವು ಹಾಲಿ ಚಾಂಪಿಯನ್ ದಕ್ಷಿಣ ಕೊರಿಯವನ್ನು 4-1 ಗೋಲುಗಳ ಬೃಹತ್ ಅಂತರದಿಂದ ಸೋಲಿಸಿತು.

ಇದು ಭಾರತದ ನಾಲ್ಕನೇ ಏಶ್ಯ ಕಪ್ ಪ್ರಶಸ್ತಿಯಾಗಿದೆ. ಇದರೊಂದಿಗೆ ಭಾರತವು ಎಫ್ಐಎಚ್ ವಿಶ್ವಕಪ್ ನಲ್ಲಿ ಆಡುವ ಅರ್ಹತೆಯನ್ನು ಗಳಿಸಿಕೊಂಡಿದೆ.

ಭಾರತದ ಪರವಾಗಿ ದಿಲ್ಪ್ರೀತ್ ಸಿಂಗ್ ಅವಳಿ ಗೋಲುಗಳನ್ನು ಬಾರಿಸಿದರೆ, ಸುಖ್ಜೀತ್ ಸಿಂಗ್ ಮತ್ತು ಅಮಿತ್ ರೋಹಿದಾಸ್ ತಲಾ ಒಂದು ಗೋಲು ಬಾರಿಸಿದರು. ಪಂದ್ಯದಲ್ಲಿ ಸಂಪೂರ್ಣ ಹಿನ್ನಡೆ ಅನುಭವಿಸಿದ ದಕ್ಷಿಣ ಕೊರಿಯವು ನಾಲ್ಕನೇ ಕ್ವಾರ್ಟರ್ನಲ್ಲಿ ಒಂದು ಗೋಲು ಬಾರಿಸುವಲ್ಲಿ ಯಶಸ್ವಿಯಾಯಿತು. ಆದರೆ, ಹಾಲಿ ಚಾಂಪಿಯನ್ ತಂಡದ ಆ ಗೋಲು ತುಂಬಾ ತಡವಾಗಿ ಬಂತು.

ಭಾರತವು ಪಂದ್ಯದುದ್ದಕ್ಕೂ ಎದುರಾಳಿಯ ಮೇಲೆ ಪ್ರಾಬಲ್ಯ ಸಾಧಿಸಿತು. ಎದುರಾಳಿಗೆ ಪ್ರತಿಹೋರಾಟದ ಅವಕಾಶವನ್ನೇ ನೀಡಲಿಲ್ಲ. ಭಾರತದ ಮೊದಲ ಗೋಲು ಪಂದ್ಯದ ಮೊದಲ ನಿಮಿಷದಲ್ಲೇ ಬಂತು. ಹರ್ಮನ್ಪ್ರೀತ್ ಸಿಂಗ್ ಚೆಂಡನ್ನು ಸರ್ಕಲ್ ಗೆ ತಳ್ಳಿ ಸುಖ್ಜೀತ್ ಸಿಂಗ್ರಿಗೆ ನೀಡಿದರು. ಸುಖ್ಜೀತ್ ಸಿಂಗ್ ಚೆಂಡನ್ನು ಯಾವುದೇ ತಪ್ಪು ಮಾಡದೆ ಗೋಲು ಪೆಟ್ಟಿಗೆಗೆ ತಳ್ಳಿ ಭಾರತಕ್ಕೆ 1-0 ಮುನ್ನಡೆ ಒದಗಿಸಿದರು.

ಎರಡನೇ ಕ್ವಾರ್ಟರ್ನಲ್ಲಿ, 27ನೇ ನಿಮಿಷದಲ್ಲಿ ದಿಲ್ಪ್ರೀತ್ ಸಿಂಗ್ ಅಮೋಘ ಗೋಲೊಂದನ್ನು ಬಾರಿಸಿ ಭಾರತದ ಮುನ್ನಡೆಯನ್ನು 2-0ಗೆ ಏರಿಸಿದರು. ಅವರು ಮೂರನೇ ಕ್ವಾರ್ಟರ್ನಲ್ಲಿ, 45ನೇ ನಿಮಿಷದಲ್ಲಿ ಇನ್ನೊಂದು ಗೋಲನ್ನು ಬಾರಿಸಿ ತಂಡದ ಅಂಕವನ್ನು 3-0ಗೆ ಒಯ್ದರು. ನಾಲ್ಕನೇ ಕ್ವಾರ್ಟರ್ನಲ್ಲಿ, 50ನೇ ನಿಮಿಷದಲ್ಲಿ ಅಮಿತ್ ರೋಹಿದಾಸ್ ತಂಡದ ನಾಲ್ಕನೇ ಗೋಲನ್ನು ಬಾರಿಸಿ ಅಂಕವನ್ನು 4-0ಗೆ ಏರಿಸಿದರು.

ದಕ್ಷಿಣ ಕೊರಿಯವು ತನ್ನ ಸಮಾಧಾನಕರ ಗೋಲನ್ನು 51ನೇ ನಿಮಿಷದಲ್ಲಿ ಬಾರಿಸಿ ಭಾರತದ ವಿಜಯದ ಅಂತರವನ್ನು 4-1ಕ್ಕೆ ಇಳಿಸಿತು. ಈ ಗೋಲನ್ನು ಸೊನ್ ಡೈನ್ ಪೆನಾಲ್ಟಿ ಕಾರ್ನರ್ ಮೂಲಕ ಬಾರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News