×
Ad

ಏಷ್ಯಾ ಕಪ್‌ ಗೆ ಭಾರತ ತಂಡ ಪ್ರಕಟ; ಸೂರ್ಯ ಕುಮಾರ್ ನಾಯಕ, ಗಿಲ್‌ ಗೆ ಉಪನಾಯಕನ ಸ್ಥಾನ

ಸಿರಾಜ್‌, ಯಶಸ್ವಿ ಜೈಸ್ವಾಲ್‌, ಶ್ರೇಯಸ್‌ ಅಯ್ಯರ್‌ ಗೆ ಕೊಕ್‌

Update: 2025-08-19 15:42 IST

Photo credit: PTI

ಮುಂಬೈ: ಏಶ್ಯಕಪ್ ಪಂದ್ಯಾವಳಿಗಾಗಿ 15 ಸದಸ್ಯರ ತಂಡವನ್ನು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ. ಸೂರ್ಯಕುಮಾರ್ ಯಾದವ್ ನಾಯಕನಾಗಿದ್ದರೆ, ಶುಭಮನ್ ಗಿಲ್‌ರನ್ನು ಭಾರತದ ಟಿ-20 ತಂಡಕ್ಕೆ ಸೇರಿಸಿಕೊಂಡಿದ್ದಲ್ಲದೆ, ಉಪ ನಾಯಕನ ಪಟ್ಟವನ್ನೂ ನೀಡಲಾಗಿದೆ.

ಈ ವರ್ಷಾರಂಭದಲ್ಲಿ ಇಂಗ್ಲೆಂಡ್ ತಂಡದ ವಿರುದ್ದ ಸ್ವದೇಶದಲ್ಲಿ ನಡೆದಿದ್ದ ಟಿ-20 ಸರಣಿಯಿಂದ ವಂಚಿತರಾಗಿದ್ದ ಗಿಲ್ ಅವರು ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಜೊತೆ ಮೂರನೇ ಪ್ರಮುಖ ಆರಂಭಿಕ ಆಟಗಾರನಾಗಿ ತಂಡ ಸೇರಿದ್ದಾರೆ. ಗಿಲ್ ಈ ವರ್ಷದ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ 650 ರನ್ ಗಳಿಸಿದ್ದರು. ಗುಜರಾತ್ ತಂಡವನ್ನು ಪ್ಲೇ ಆಫ್‌ನತ್ತ ಮುನ್ನಡೆಸಿದ್ದರು. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 2-2ರಿಂದ ಸಮಬಲಗೊಳಿಸಿ ತನ್ನ ನಾಯಕತ್ವದ ಗುಣದಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.

ಅಚ್ಚರಿಯೆಂಬಂತೆ ಯಶಸ್ವಿ ಜೈಸ್ವಾಲ್ ಹಾಗೂ ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇಂಗ್ಲೆಂಡ್ ಪ್ರವಾಸದ ವೇಳೆ ತನ್ನ ಕೆಲಸದ ಒತ್ತಡದ ಕುರಿತಂತೆ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಜಸ್‌ಪ್ರಿತ್ ಬುಮ್ರಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

15 ಸದಸ್ಯರಲ್ಲದೆ, ಐವರು ಮೀಸಲು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಅವರುಗಳೆಂದರೆ: ಪ್ರಸಿದ್ಧ ಕೃಷ್ಣ, ವಾಶಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್ ಹಾಗೂ ಯಶಸ್ವಿ ಜೈಸ್ವಾಲ್. ಭಾರತದ ಏಕದಿನ ತಂಡದ ಪ್ರಮುಖ ಸದಸ್ಯನಾಗಿರುವ ಅಯ್ಯರ್‌ರನ್ನು ಹೊರಗಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.

ತಮ್ಮ ಆಯ್ಕೆಯ ಕುರಿತು ವಿವರಣೆ ನೀಡಿದ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್, ‘‘ಅಭಿಷೇಕ್ ಉತ್ತಮ ಬ್ಯಾಟಿಂಗ್‌ನ ಜೊತೆಗೆ ಬೌಲಿಂಗ್ ಮಾಡಬಲ್ಲರು. ದುರದೃಷ್ಟವಶಾತ್ ಯಶಸ್ವಿ ಜೈಸ್ವಾಲ್ ಹಾಗೂ ಶ್ರೇಯಸ್ ಅಯ್ಯರ್ ಏಶ್ಯಕಪ್ ಟೂರ್ನಿಯಿಂದ ವಂಚಿತರಾಗಿದ್ದಾರೆ. ಇದರಲ್ಲಿ ಅವರಿಬ್ಬರ ತಪ್ಪಿಲ್ಲ’’ ಎಂದರು.

ಗಿಲ್ ಅವರನ್ನು ಉಪ ನಾಯಕನಾಗಿ ಭಡ್ತಿ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅಗರ್ಕರ್, ‘‘ಅವರು ನಮ್ಮ ಎಲ್ಲ ನಿರೀಕ್ಷೆಗಳನ್ನು ಮೀರಿ ಪ್ರದರ್ಶನ ನೀಡುತ್ತಿದ್ದಾರೆ’’ ಎಂದರು.

ಜಿತೇಶ್ ಶರ್ಮಾರನ್ನು ಸ್ಯಾಮ್ಸನ್ ಜೊತೆಗೆ ಎರಡನೇ ವಿಕೆಟ್‌ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಶರ್ಮಾ ಅಂತಿಮ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುತ್ತಾರೋ? ಎಂದು ಕಾದು ನೋಡಬೇಕಾಗಿದೆ.

ಕಳೆದ ವರ್ಷದ ಟಿ-20 ವಿಶ್ವಕಪ್‌ನಲ್ಲಿ ‘ಸರಣಿಶ್ರೇಷ್ಠ’ ಪ್ರಶಸ್ತಿ ಪಡೆದಿದ್ದ ಬುಮ್ರಾ ತಂಡಕ್ಕೆ ಮರಳಿದ್ದಾರೆ. ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಹಾಗೂ ಹಾರ್ದಿಕ್ ಪಾಂಡ್ಯ ಅವನ್ನೊಳಗೊಂಡ ವೇಗದ ಬೌಲಿಂಗ್‌ಗೆ ಬುಮ್ರಾ ಸೇರ್ಪಡೆ ಹೊಸ ಶಕ್ತಿ ತಂದಿದೆ. ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಹಾಗೂ ಅಕ್ಷರ್ ಪಟೇಲ್ ಅವರಿದ್ದಾರೆ. ಅಭಿಷೇಕ್ ಶರ್ಮಾ ಪಾರ್ಟ್‌ಟೈಂ ಬೌಲರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಏಶ್ಯಕಪ್ ಕ್ರಿಕೆಟ್ ಪಂದ್ಯಾವಳಿಯು ದುಬೈ ಹಾಗೂ ಅಬುಧಾಬಿಯಲ್ಲಿ ಸೆಪ್ಟಂಬರ್ 9ರಿಂದ 28ರ ತನಕ ನಿಗದಿಯಾಗಿದ್ದು, 8 ತಂಡಗಳು ಟಿ-20 ಮಾದರಿಯಲ್ಲಿ ಆಡಲಿವೆ. ಏಶ್ಯನ್ ಕ್ರಿಕೆಟ್ ಮಂಡಳಿ(ಎಸಿಸಿ)ಪಂದ್ಯಗಳು ನಡೆಯಲಿರುವ ಎಲ್ಲ ಸ್ಥಳಗಳನ್ನು ಖಚಿತಪಡಿಸಿದೆ. ದುಬೈ 11 ಪಂದ್ಯಗಳ ಆತಿಥ್ಯವಹಿಸಿದರೆ, ಅಬುಧಾಬಿಯು ಅಫ್ಘಾನಿಸ್ತಾನ ಹಾಗೂ ಹಾಂಕಾಂಗ್ ನಡುವಿನ ಟೂರ್ನಿಯ ಆರಂಭಿಕ ಪಂದ್ಯ ಸಹಿತ ಒಟ್ಟು 8 ಪಂದ್ಯಗಳ ಆತಿಥ್ಯವಹಿಸಲಿದೆ.

ಪಂದ್ಯಾವಳಿಯಲ್ಲಿ ಎಸಿಸಿಯ ಎಲ್ಲ ಐದು ಪೂರ್ಣ ಸದಸ್ಯ ರಾಷ್ಟ್ರಗಳಾದ-ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾದ ಜೊತೆಗೆ ಯುಎಇ, ಒಮಾನ್ ಹಾಗೂ ಹಾಂಕಾಂಗ್ ತಂಡಗಳು ಭಾಗವಹಿಸಲಿದ್ದು, ಇವುಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ‘ಎ’ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ ಹಾಗೂ ಒಮಾನ್ ತಂಡಗಳಿದ್ದರೆ, ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಹಾಂಕಾಂಗ್ ತಂಡಗಳಿವೆ.

ಭಾರತವು ಪಂದ್ಯಾವಳಿಯ ಅಧಿಕೃತ ಆತಿಥ್ಯ ದೇಶವಾಗಿದ್ದರೂ ಬಿಸಿಸಿಐ ಹಾಗೂ ಪಿಸಿಬಿ ನಡುವಿನ ಒಪ್ಪಂದದ ಹಿನ್ನೆಲೆಯಲ್ಲಿ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲಾಗುತ್ತಿದೆ. ಭಾರತ ಇಲ್ಲವೇ ಪಾಕಿಸ್ತಾನ ಆತಿಥ್ಯವಹಿಸುವ ಟೂರ್ನಮೆಂಟ್‌ಗಳಲ್ಲಿ ಇದು ಮೂರು ವರ್ಷಗಳ ಕಾಲ ಹೀಗೆಯೇ ಮುಂದುವರಿಯುತ್ತದೆ.

ಟೀಮ್ ಇಂಡಿಯಾವು ಸೆಪ್ಟಂಬರ್ 10ರಂದು ಯುಎಇ ತಂಡವನ್ನು ಎದುರಿಸುವ ಮೂಲಕ ಏಶ್ಯಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಸೆ.14ರಂದು ದುಬೈನಲ್ಲಿ ಬಹು ನಿರೀಕ್ಷಿತ ಪಂದ್ಯದಲ್ಲಿ ಪಾಕಿಸ್ತಾನ ತಂಡದೊಂದಿಗೆ ಹೋರಾಡಲಿದೆ. ಸೆ.19 ರಂದು ಅಬುಧಾಬಿಯಲ್ಲಿ ಒಮಾನ್ ವಿರುದ್ಧ ತನ್ನ ಕೊನೆಯ ಗ್ರೂಪ್ ಪಂದ್ಯವನ್ನು ಆಡಲಿದೆ.

ಸೆ.20ರಿಂದ 26ರ ತನಕ ಪಂದ್ಯಾವಳಿಯಲ್ಲಿ ಸೂಪರ್-4 ಹಂತದ ಪಂದ್ಯಗಳು ನಡೆಯಲಿವೆ. ಪ್ರತೀ ಗುಂಪಿನ ಎರಡು ಅಗ್ರ ತಂಡಗಳು ಸೂಪರ್-4 ಹಂತಕ್ಕೇರಲಿವೆ. ಒಂದು ವೇಳೆ ಭಾರತ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದರೆ, ತನ್ನ ಎಲ್ಲ ಸೂಪರ್-4 ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಆದರೆ 2ನೇ ಸ್ಥಾನ ಪಡೆದರೆ, ಒಂದು ಪಂದ್ಯವನ್ನು ಅಬುಧಾಬಿ ಹಾಗೂ 2 ಪಂದ್ಯವನ್ನು ದುಬೈನಲ್ಲಿ ಆಡುತ್ತದೆ.

ಸೆಪ್ಟಂಬರ್ 28ರಂದು ದುಬೈನಲ್ಲಿ ಫೈನಲ್ ಪಂದ್ಯದೊಂದಿಗೆ ಪಂದ್ಯಾವಳಿಯು ಮುಕ್ತಾಯವಾಗಲಿದೆ. ಸೂಪರ್-4 ಹಂತದಿಂದ ಎರಡು ಶ್ರೇಷ್ಠ ತಂಡಗಳು ಚಾಂಪಿಯನ್‌ಶಿಪ್ ಪ್ರಶಸ್ತಿಗಾಗಿ ಹೋರಾಡಲಿವೆ.

ಭಾರತ ತಂಡ:

ಸೂರ್ಯಕುಮಾರ್ ಯಾದವ್(ನಾಯಕ), ಶುಭಮನ್ ಗಿಲ್(ಉಪ ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ(ವಿಕೆಟ್‌ಕೀಪರ್),ಜಸ್‌ಪ್ರಿತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್‌ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.

ಮೀಸಲು ಆಟಗಾರರು:

ಪ್ರಸಿದ್ಧ ಕೃಷ್ಣ, ವಾಶಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News