ಏಶ್ಯ ಕಪ್: ಭಾರತೀಯ ತಂಡದ ಆಯ್ಕೆಗೆ ಬುಮ್ರಾ ಲಭ್ಯ
ಜಸ್‌ಪ್ರೀತ್ ಬುಮ್ರಾ | PTI
ಮುಂಬೈ, ಆ. 17: ಮುಂಬರುವ ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿಗೆ ತಾನು ಲಭ್ಯನಿರುವುದಾಗಿ ಭಾರತೀಯ ಕ್ರಿಕೆಟ್ ತಂಡದ ಮುಂಚೂಣಿಯ ವೇಗಿ ಜಸ್‌ಪ್ರೀತ್ ಬುಮ್ರಾ ಘೋಷಿಸಿದ್ದಾರೆ.
ಪಂದ್ಯಾವಳಿಯು ಸೆಪ್ಟಂಬರ್ 9ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಡೆಯಲಿದೆ.
ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ನಡೆದ ಐದು ಪಂದ್ಯಗಳ ಆ್ಯಂಡರ್‌ಸನ್-ತೆಂಡುಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಬುಮ್ರಾ ಕೇವಲ ಮೂರು ಪಂದ್ಯಗಳಲ್ಲಿ ಆಡಿದ್ದರು. ಅವರ ಕೆಲಸದ ಒತ್ತಡವನ್ನು ನಿಭಾಯಿಸುವ ಹಾಗೂ ಆ ಮೂಲಕ ಅವರ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವ ಯೋಜನೆಯ ಭಾಗ ಅದಾಗಿತ್ತು. ಆದರೂ ಅವರು ಭಾರತದ ಪರಿಣಾಮಕಾರಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಅವರು ಸರಣಿಯಲ್ಲಿ 26ರ ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಗಳಿಸಿದ್ದಾರೆ.
31 ವರ್ಷದ ಬುಮ್ರಾರನ್ನು, ಮುಖ್ಯವಾಗಿ ಬಿಳಿ ಚೆಂಡಿನ ಕ್ರಿಕೆಟ್ (50 ಮತ್ತು 20 ಓವರ್‌ಗಳ ಕ್ರಿಕೆಟ್)ನಲ್ಲಿ ಬಿಟ್ಟು ಬಿಟ್ಟು ಬಳಸಲಾಗುತ್ತಿದೆ. ಅವರು ಬಿಳಿ ಚೆಂಡಿನ ಕ್ರಿಕೆಟ್‌ನಲ್ಲಿ ಕೊನೆಯದಾಗಿ ಆಡಿರುವುದು ಕಳೆದ ವರ್ಷದ ಜೂನ್‌ನಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ಟಿ20 ವಿಶ್ವಕಪ್ ಫೈನಲ್‌ನಲ್ಲಿ. ಅದೂ ಅಲ್ಲದೆ, 2023 ನವೆಂಬರ್ ನಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಫೈನಲ್ ನಲ್ಲಿ ಆಡಿದ ಬಳಿಕ ಬುಮ್ರಾ ಯಾವುದೇ ಏಕದಿನ ಪಂದ್ಯದಲ್ಲೂ ಆಡಿಲ್ಲ.
ಬೆನ್ನು ನೋವಿನಿಂದ ಬಳಲುತ್ತಿದ್ದ ಬುಮ್ರಾರನ್ನು ಈ ವರ್ಷದ ಆದಿ ಭಾಗದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೂ ಆಯ್ಕೆ ಮಾಡಿರಲಿಲ್ಲ.
ಏಶ್ಯ ಕಪ್‌ಗಾಗಿ ಭಾರತದ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲು ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮಂಗಳವಾರ ಮುಂಬೈಯಲ್ಲಿ ಸಭೆ ಸೇರುವ ನಿರೀಕ್ಷೆಯಿದೆ. ಈ ಬಾರಿಯ ಏಶ್ಯ ಕಪ್ ಪಂದ್ಯಾವಳಿಯನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತದೆ.