ಐಪಿಎಲ್ ಆರೆಂಜ್ ಕ್ಯಾಪ್ ರೇಸ್: ಸೂರ್ಯಕುಮಾರ್, ರಾಹುಲ್‌ಗೆ ಅಗ್ರ-3ಕ್ಕೇರುವ ಅವಕಾಶ
ಸೂರ್ಯಕುಮಾರ್,KL ರಾಹುಲ್ | PC : PTI
ಹೊಸದಿಲ್ಲಿ: ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲುವ ಮೂಲಕ 2025ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಕಳಪೆ ಪ್ರದರ್ಶನ ಮುಂದುವರಿಸಿದೆ. ಆದರೆ ಪರ್ಪಲ್ ಕ್ಯಾಪ್ ಲಿಸ್ಟ್‌ನಲ್ಲಿ ಸಿಎಸ್‌ಕೆಗೆ ಶುಭ ಸುದ್ದಿಯೊಂದು ಲಭಿಸಿದೆ.
ಪರ್ಪಲ್ ಕ್ಯಾಪ್ ಟೇಬಲ್: ಗುಜರಾತ್ ಟೈಟಾನ್ಸ್ ತಂಡದ ಪ್ರಸಿದ್ಧ ಕೃಷ್ಣ ರವಿವಾರ ಒಂದು ವಿಕೆಟ್ ಪಡೆಯುವ ಮೂಲಕ ಒಟ್ಟು ವಿಕೆಟ್‌ಗಳ ಸಂಖ್ಯೆಯನ್ನು 21ಕ್ಕೆ ವಿಸ್ತರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ರಾಜಸ್ಥಾನದ ವಿರುದ್ಧ 3 ಓವರ್‌ಗಳಲ್ಲಿ 42 ರನ್‌ಗೆ 1 ವಿಕೆಟ್ ಪಡೆದಿದ್ದ ಸಿಎಸ್‌ಕೆ ಸ್ಪಿನ್ನರ್ ನೂರ್ ಅಹ್ಮದ್ ಕೂಡ ಒಟ್ಟು 21 ವಿಕೆಟ್‌ಗಳನ್ನು ಪಡೆದಿದ್ದರೂ ಗರಿಷ್ಠ ಇಕಾನಮಿ ರೇಟ್(8.41) ಇರುವ ಕಾರಣ 2ನೇ ಸ್ಥಾನದಲ್ಲಿದ್ದಾರೆ.
ಎ.27ರಿಂದ ಆರ್‌ಸಿಬಿ ಪರ ಯಾವುದೇ ಪಂದ್ಯವನ್ನಾಡದ ಜೋಶ್ ಹೇಝಲ್‌ವುಡ್ ಸದ್ಯ ಭುಜನೋವಿನಿಂದ ಬಳಲುತ್ತಿದ್ದಾರೆ. ಒಟ್ಟು 18 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಟ್ರೆಂಟ್ ಬೌಲ್ಟ್(18 ವಿಕೆಟ್) ಅವರು ಹೇಝಲ್‌ವುಡ್‌ರನ್ನು ಹಿಂದಿಕ್ಕುವ ಸಾಧ್ಯತೆಯಿದೆ.
ಆರೆಂಜ್ ಕ್ಯಾಪ್ ಪಟ್ಟಿ: ಮುಂಬೈ ಹಾಗೂ ಡೆಲ್ಲಿ ಪಂದ್ಯ ನಿಗದಿಯಂತೆಯೇ ನಡೆದರೆ ಸೂರ್ಯಕುಮಾರ್ ಯಾದವ್ ಆರೆಂಜ್ ಕ್ಯಾಪ್ ಲಿಸ್ಟ್‌ನಲ್ಲಿ ಅಗ್ರ-3ರಲ್ಲಿ ಸ್ಥಾನ ಪಡೆಯುವ ಅವಕಾಶ ಇದೆ. ಸೂರ್ಯಕುಮಾರ್ 510 ರನ್ ಗಳಿಸಿ 4ನೇ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ತಂಡದ ಬಿ. ಸಾಯಿ ಸುದರ್ಶನ್ 617 ರನ್ ಗಳಿಸಿ ಸೂರ್ಯಗಿಂತ 100ಕ್ಕೂ ಅಧಿಕ ರನ್ ಮುಂದಿದ್ದಾರೆ. 2ನೇ ಸ್ಥಾನದಲ್ಲಿರುವ ಶುಭಮನ್ ಗಿಲ್(610 ರನ್)ಸೂರ್ಯಗಿಂತ ಸಾಕಷ್ಟು ಮುಂದಿದ್ದಾರೆ. ಸಿಎಸ್‌ಕೆ ವಿರುದ್ಧ 19 ಎಸೆತಗಳಲ್ಲಿ 36 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ 559 ರನ್ ಗಳಿಸಿ 3ನೇ ಸ್ಥಾನದಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಶಕ್ತಿ ಕೆ.ಎಲ್. ರಾಹುಲ್ 493 ರನ್ ಗಳಿಸಿ 7ನೇ ಸ್ಥಾನದಲ್ಲಿದ್ದಾರೆ.