ಐಸಿಸಿ ಪುರುಷರ ಟೆಸ್ಟ್ ರ‍್ಯಾಂಕಿಂಗ್ | ಒಂದೇ ವಾರದಲ್ಲಿ ನಂಬರ್ ವನ್ ಸ್ಥಾನವನ್ನು ಮರುಪಡೆದ ಜೋ ರೂಟ್
ಜೋ ರೂಟ್ | PC : ICC
ದುಬೈ, ಜು. 16: ಬುಧವಾರ ಬಿಡುಗಡೆಯಾದ ಐಸಿಸಿ ಪುರುಷರ ಟೆಸ್ಟ್ ರ‍್ಯಾಂಕಿಂಗ್ಸ್ ನಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಅಗ್ರ ಸ್ಥಾನವನ್ನು ಒಂದು ವಾರದ ಬಳಿಕ ಮತ್ತೆ ಪಡೆದುಕೊಂಡಿದ್ದಾರೆ. ಅದೇ ವೇಳೆ, ಭಾರತದ ಆಲ್ ರೌಂಡರ್ ರವೀಂದ್ರ ಜಡೇಜ 34ನೇ ಸ್ಥಾನಕ್ಕೆ ಏರಿದ್ದಾರೆ.
ಭಾರತದ ವಿರುದ್ಧದ ಆ್ಯಂಡರ್ ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ರೂಟ್ 104 ಮತ್ತು 40 ರನ್ ಗಳನ್ನು ಗಳಿಸಿದ್ದಾರೆ. ಈ ನಿರ್ವಹಣೆಯ ಆಧಾರದಲ್ಲಿ 34 ವರ್ಷದ ರೂಟ್ ಮತ್ತೊಮ್ಮೆ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಅವರು ಅಗ್ರ ಸ್ಥಾನಕ್ಕೆ ಏರಿರುವುದು ಇದು ಎಂಟನೇ ಬಾರಿಯಾಗಿದೆ.
ಆ ಪಂದ್ಯವನ್ನು ಇಂಗ್ಲೆಂಡ್ 22 ರನ್ ಗಳಿಂದ ರೋಮಾಂಚಕಾರಿಯಾಗಿ ಗೆದ್ದಿದೆ.
ಕುಮಾರ ಸಂಗಕ್ಕಾರ ಬಳಿಕ, ನಂಬರ್ ಒಂದನೇ ಸ್ಥಾನದಲ್ಲಿರುವ ಅತ್ಯಂತ ಹಿರಿಯ ಟೆಸ್ಟ್ ಬ್ಯಾಟರ್ ಜೋ ರೂಟ್ ಆಗಿದ್ದಾರೆ. ಸಂಗಕ್ಕಾರ 2014ರಲ್ಲಿ 37ನೇ ವರ್ಷದಲ್ಲಿ ನಂಬರ್ ವನ್ ಟೆಸ್ಟ್ ಬ್ಯಾಟರ್ ಆಗಿದ್ದರು.
ಇದಕ್ಕೂ ಮೊದಲು ರೂಟ್ ತನ್ನ ನಂಬರ್ ವನ್ ಸ್ಥಾನವನ್ನು ತನ್ನದೇ ದೇಶದ ಹ್ಯಾರಿ ಬ್ರೂಕ್ ಗೆ ಒಪ್ಪಿಸಿದ್ದರು. ಹೊಸ ರ‍್ಯಾಂಕಿಂಗ್ ಪಟ್ಟಿಯಲ್ಲಿ ಬ್ರೂಕ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ನ್ಯೂಝಿಲ್ಯಾಂಡ್ ನ ಕೇನ್ ವಿಲಿಯಮ್ಸನ್ ಎರಡನೇ ಸ್ಥಾನದಲ್ಲಿದ್ದಾರೆ.
ಭಾರತೀಯ ಬ್ಯಾಟರ್ ಗಳ ಪೈಕಿ ಆರಂಭಿಕ ಯಶಸ್ವಿ ಜೈಸ್ವಾಲ್ ಮತ್ತು ಉಪ ನಾಯಕ ರಿಶಭ್ ಪಂತ್ ತಲಾ ಒಂದು ಸ್ಥಾನ ಕೆಳಕ್ಕಿಳಿದು ಕ್ರಮವಾಗಿ 5 ಮತ್ತು 8ನೇ ಸ್ಥಾನಗಳಲ್ಲಿದ್ದಾರೆ. ನಾಯಕ ಶುಭಮನ್ ಗಿಲ್ ಕೂಡ ಮೂರು ಸ್ಥಾನ ಕೆಳಕ್ಕೆ ಜಾರಿ ಒಂಭತ್ತನೇ ಸ್ಥಾನದಲ್ಲಿದ್ದಾರೆ.
ಅದೇ ವೇಳೆ, ರವೀಂದ್ರ ಜಡೇಜ ಐದು ಸ್ಥಾನ ಮೇಲೇರಿ 34ನೇ ಸ್ಥಾನ ಸಂಪಾದಿಸಿದ್ದಾರೆ. ಅವರು ಲಾರ್ಡ್ಸ್ ಪಂದ್ಯದಲ್ಲಿ 72 ಮತ್ತು 61 ರನ್ ಗಳನ್ನು ಗಳಿಸಿದ್ದರು.
ಆ ಪಂದ್ಯದಲ್ಲಿ 100 ಮತ್ತು 39 ರನ್ ಗಳನ್ನು ಗಳಿಸಿರುವ ಕೆ.ಎಲ್. ರಾಹುಲ್ ಐದು ಸ್ಥಾನಗಳನ್ನು ಮೇಲೇರಿ 35ನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಬೌಲಿಂಗ್ ವಿಭಾಗದಲ್ಲಿ, ಭಾರತೀಯ ವೇಗಿ ಜಸ್‌ಪ್ರೀತ್ ಬುಮ್ರಾ ತನ್ನ ಒಂದನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅವರು ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕದ ಕಗಿಸೊ ರಬಡರಿಗಿಂತ 50 ಅಂಕಗಳಿಂದ ಮುಂದಿದ್ದಾರೆ.
ಭಾರತೀಯ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ 58ನೇ ಸ್ಥಾನದಿಂದ 46ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.