ಕಪಿಲ್ ದೇವ್ ನಿರ್ಮಿಸಿದ್ದ ಅನಪೇಕ್ಷಿತ ವಿಶ್ವ ದಾಖಲೆ ಮುರಿದ ಜೋ ರೂಟ್
ಜೋ ರೂಟ್ | Photo Credit : NDTV
ಬ್ರಿಸ್ಬೇನ್, ಡಿ.8: ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಗಾಬಾ ಸ್ಟೇಡಿಯಂನಲ್ಲಿ ಇತ್ತೀಚೆಗೆ ಕೊನೆಗೊಂಡಿರುವ ಆಸ್ಟ್ರೇಲಿಯ ತಂಡ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ಕ್ರಿಕೆಟ್ ದಂತಕತೆ ಕಪಿಲ್ ದೇವ್ ಹೆಸರಲ್ಲಿದ್ದ ಅನಪೇಕ್ಷಿತ ವಿಶ್ವ ದಾಖಲೆಯೊಂದನ್ನು ಮುರಿದರು.
ಎರಡನೇ ಟೆಸ್ಟ್ ಪಂದ್ಯವನ್ನು ಎಂಟು ವಿಕೆರ್ ಗಳಿಂದ ಸೋತಿರುವ ಇಂಗ್ಲೆಂಡ್ ತಂಡವು ಆ್ಯಶಸ್ ಸರಣಿಯಲ್ಲಿ 0-2ರಿಂದ ಹಿನ್ನಡೆ ಕಂಡಿದೆ.
ಆಸ್ಟ್ರೇಲಿಯದ ನೆಲದಲ್ಲಿ ತನ್ನ ಚೊಚ್ಚಲ ಶತಕವನ್ನು ಸಿಡಿಸಿದ್ದ ರೂಟ್ ವೈಯಕ್ತಿಕವಾಗಿ ಮಹತ್ವದ ಮೈಲಿಗಲ್ಲು ತಲುಪಿದ್ದರು. 206 ಎಸೆತಗಳಲ್ಲಿ ಔಟಾಗದೆ 138 ರನ್ ಗಳಿಸಿದ್ದ ರೂಟ್ ಅವರು ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ 334 ರನ್ ಕಲೆ ಹಾಕುವಲ್ಲಿ ನೆರವಾಗಿದ್ದರು. ಆಸ್ಟ್ರೇಲಿಯದಲ್ಲಿ ನಡೆದಿದ್ದ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಪ್ರವಾಸಿ ತಂಡದ ಆಟಗಾರ ಎನಿಸಿಕೊಂಡಿದ್ದರು.
ರೂಟ್ ಅವರ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಆಸ್ಟ್ರೇಲಿಯ ತಂಡವು ತನ್ನ ಮೊದಲ ಇನಿಂಗ್ಸ್ ನಲ್ಲಿ 511 ರನ್ ಕಲೆ ಹಾಕಿ 177 ರನ್ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು. ಇಂಗ್ಲೆಂಡ್ ತಂಡ ಎರಡನೇ ಇನಿಂಗ್ಸ್ ನಲ್ಲಿ ಕೇವಲ 241 ರನ್ ಗಳಿಸಿತ್ತು. ರೂಟ್ ಕೇವಲ 15 ರನ್ ಕೊಡುಗೆ ನೀಡಿದ್ದರು. ಆಸ್ಟ್ರೇಲಿಯ ತಂಡವು 65 ರನ್ ಗುರಿಯನ್ನು ಸುಲಭವಾಗಿ ಚೇಸ್ ಮಾಡಿತು.
ರೂಟ್ ಆಸ್ಟ್ರೇಲಿಯದಲ್ಲಿ ಆಡಿದ 16ನೇ ಪಂದ್ಯದಲ್ಲೂ ಗೆಲುವು ಕಾಣಲಿಲ್ಲ. ವಿದೇಶಿ ನೆಲದಲ್ಲಿ ಗರಿಷ್ಠ ಪಂದ್ಯಗಳನ್ನಾಡಿದ್ದರೂ ಗೆಲುವಿನ ಮುಖ ಕಾಣದೆ ಹೊಸ ದಾಖಲೆ ನಿರ್ಮಿಸಿದರು. ಇದರೊಂದಿಗೆ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದರು. ಕಪಿಲ್ ದೇವ್ ಪಾಕಿಸ್ತಾನದಲ್ಲಿ 15 ಪಂದ್ಯಗಳನ್ನು ಆಡಿದ್ದರೂ ಗೆಲುವು ಕಂಡಿರಲಿಲ್ಲ. 15ರಲ್ಲಿ 10 ಪಂದ್ಯಗಳು ಡ್ರಾ ಆಗಿದ್ದರೆ, 5 ಪಂದ್ಯಗಳಲ್ಲಿ ಸೋತಿದ್ದರು.
ಆಸ್ಟ್ರೇಲಿಯದಲ್ಲಿ ಆಡಿರುವ 12 ಪಂದ್ಯಗಳಲ್ಲಿ ಗೆಲುವನ್ನೇ ಕಾಣದ ನ್ಯೂಝಿಲ್ಯಾಂಡ್‌ನ ಡೇನಿಯಲ್ ವೆಟೋರಿ 2ನೇ ಸ್ಥಾನದಲ್ಲಿದ್ದಾರೆ. ಬೆನ್ ಸ್ಟೋಕ್ಸ್(11 ಪಂದ್ಯಗಳು)ಹಾಗೂ ಡೇವಿಡ್ ಮಲನ್(10 ಪಂದ್ಯಗಳು)ಆ ನಂತರದ ಸ್ಥಾನದಲ್ಲಿದ್ದಾರೆ.
ರೂಟ್ ಅವರು ಆಸ್ಟ್ರೇಲಿಯದಲ್ಲಿ ಈ ತನಕ ಆಡಿರುವ 16 ಪಂದ್ಯಗಳ ಪೈಕಿ 14 ಬಾರಿ ಸೋಲುಂಡಿದ್ದಾರೆ. ಜೇಮ್ಸ್ ಆ್ಯಂಡರ್ಸನ್ ಹಾಗೂ ಅಲಸ್ಟೈರ್ ಕುಕ್ ಅವರು ಆಸ್ಟ್ರೇಲಿಯದಲ್ಲಿ ತಲಾ 15 ಬಾರಿ ಸೋಲುಂಡಿದ್ದಾರೆ. ಜಾಕ್ ಹಾಬ್ಸ್ ಹಾಗೂ ಸಚಿನ್ ತೆಂಡುಲ್ಕರ್ ಇಬ್ಬರೂ ಆಸ್ಟ್ರೇಲಿಯದಲ್ಲಿ 14 ಪಂದ್ಯಗಳಲ್ಲಿ ಸೋತಿದ್ದರು.
ರೂಟ್ ಅವರು ಆಸ್ಟ್ರೇಲಿಯದಲ್ಲಿ ಆಡಿರುವ ತನ್ನ 30ನೇ ಇನಿಂಗ್ಸ್ ನಲ್ಲಿ ಕೊನೆಗೂ ಶತಕ ಗಳಿಸಿದರು. ಗೋರ್ಡನ್ ಗ್ರೀನಿಜ್ ಆಸ್ಟ್ರೇಲಿಯದಲ್ಲಿ 32ನೇ ಇನಿಂಗ್ಸ್ ನಲ್ಲಿ ಶತಕ ಗಳಿಸಿದ್ದರು.
ರೂಟ್ ಅವರು 2013ರಿಂದ ನಿರಂತರವಾಗಿ ಆ್ಯಶಸ್ ಪ್ರವಾಸದಲ್ಲಿ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದ್ದಾರೆ. 17 ಪಂದ್ಯಗಳಲ್ಲಿ 16ರಲ್ಲಿ ಭಾಗವಹಿಸಿದ್ದರು. ಇಂಗ್ಲೆಂಡ್ ತಂಡವು 2011ರಲ್ಲಿ ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯ ತಂಡದ ವಿರುದ್ದ ಕೊನೆಯ ಬಾರಿ ಗೆಲುವು ದಾಖಲಿಸಿತ್ತು.