×
Ad

ಮೊದಲ ಟೆಸ್ಟ್: 300 ರನ್ ಗಡಿ ದಾಟಿದ ಭಾರತದ ಮುನ್ನಡೆ

Update: 2025-06-23 22:46 IST

ಲೀಡ್ಸ್ : ಆರಂಭಿಕ ಬ್ಯಾಟರ್ ಕೆ.ಎಲ್.ರಾಹುಲ್(ಔಟಾಗದೆ 120, 227 ಎಸೆತ, 15 ಬೌಂಡರಿ)ಹಾಗೂ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್(118 ರನ್, 140 ಎಸೆತ)ಶತಕದ ಸಹಾಯದಿಂದ ಟೀಮ್ ಇಂಡಿಯಾವು ಆತಿಥೇಯ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯತ್ತಿರುವ ಮೊದಲ ಟೆಸ್ಟ್ ಪಂದ್ಯದ 4ನೇ ದಿನದಾಟದ ಟೀ ವಿರಾಮದ ವೇಳೆಗೆ ಒಟ್ಟು 304 ರನ್ ಮುನ್ನಡೆಯಲ್ಲಿದೆ.

4ನೇ ದಿನದಾಟವಾದ ಸೋಮವಾರ ಭಾರತ ಕ್ರಿಕೆಟ್ ತಂಡವು 2 ವಿಕೆಟ್ ನಷ್ಟಕ್ಕೆ 90 ರನ್‌ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ್ದು ಟೀ ವಿರಾಮದ ವೇಳೆಗೆ 75 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 298 ರನ್ ಗಳಿಸಿದೆ.

ಬ್ಯಾಟಿಂಗ್ ಮುಂದುವರಿಸಿದ ರಾಹುಲ್ ಹಾಗೂ ಪಂತ್ 4ನೇ ವಿಕೆಟ್ ಜೊತೆಯಾಟದಲ್ಲಿ 283 ಎಸೆತಗಳಲ್ಲಿ 195 ರನ್ ಸೇರಿಸಿ ತಂಡದ ಇನಿಂಗ್ಸ್‌ಗೆ ಬಲ ತುಂಬಿದರು.

ರಾಹುಲ್ 202 ಎಸೆತಗಳಲ್ಲಿ 13 ಬೌಂಡರಿಗಳ ಸಹಾಯದಿಂದ ತನ್ನ 9ನೇ ಶತಕ ಪೂರೈಸಿದರು.

ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ ಪಂತ್ ಅವರು ಕೇವಲ 130 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಾಯದಿಂದ 8ನೇ ಬಾರಿ ಮೂರಂಕೆ ದಾಟಿದರು.

ಪಂತ್ 118 ರನ್ ಗಳಿಸಿದ್ದಾಗ ಸ್ಪಿನ್ನರ್ ಶುಐಬ್ ಬಶೀರ್ ಬೌಲಿಂಗ್‌ನಲ್ಲಿ ಕ್ರಾಲಿಗೆ ವಿಕೆಟ್ ಒಪ್ಪಿಸಿದರು.

ಮೊದಲ ಸೆಶನ್‌ನಲ್ಲಿ ನಾಯಕ ಶುಭಮನ್ ಗಿಲ್ ವಿಕೆಟನ್ನು ಕಳೆದುಕೊಂಡ ಭಾರತವು ಕೇವಲ 63 ರನ್ ಗಳಿಸಿತು. ರಾಹುಲ್ 55 ರನ ಗಳಿಸಿದ್ದಾಗ ಹ್ಯಾರಿ ಬ್ರೂಕ್‌ರಿಂದ ಜೀವದಾನ ಪಡೆದರು.

ಟೀ ವಿರಾಮದ ವೇಳೆಗೆ ಕನ್ನಡಿಗರಾದ ರಾಹುಲ್ ಹಾಗೂ ಕರುಣ್ ನಾಯರ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ ಬೌಲಿಂಗ್ ವಿಭಾಗದಲ್ಲಿ ಬ್ರೆಂಡನ್ ಕಾರ್ಸ್(2-62)ಯಶಸ್ವಿ ಪ್ರದರ್ಶನ ನೀಡಿದರು. ಬೆನ್ ಸ್ಟೋಕ್ಸ್(1-40)ಹಾಗೂ ಶುಐಬ್ ಬಶೀರ್(1-81)ತಲಾ ಒಂದು ವಿಕೆಟ್‌ಗಳನ್ನು ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News