ಏಕದಿನ ಕ್ರಿಕೆಟ್ ಗೆ ಮರಳಲು ಲಂಡನ್ ನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ
ವಿರಾಟ್ ಕೊಹ್ಲಿ, ನಯೀಮ್ ಅಮೀನ್ | PC : Virat Kohli Instagram
ಲಂಡನ್, ಆ. 8: ಏಕದಿನ ಪಂದ್ಯಗಳಿಗೆ ಮರಳಲು ಸಿದ್ಧತೆ ನಡೆಸುತ್ತಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಲಂಡನ್ ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ನಗರದ ಒಳಾಂಗಣವೊಂದರಲ್ಲಿ ಗುಜರಾತ್ ಟೈಟಾನ್ಸ್ ತಂಡದ ಸಹಾಯಕ ಕೋಚ್ ನಯೀಮ್ ಅಮೀನ್ ಜೊತೆ ಶುಕ್ರವಾರ ಅಭ್ಯಾಸ ನಡೆಸುತ್ತಿರುವ ಚಿತ್ರಗಳನ್ನು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಅತ್ಯುತ್ಸಾಹದಲ್ಲಿದ್ದಂತೆ ಮತ್ತು ಉತ್ತಮ ದೈಹಿಕ ಕ್ಷಮತೆ ಹೊಂದಿದಂತೆ ಕಂಡುಬಂತು. ಬೂದು ಟಿ-ಶರ್ಟ್ ಮತ್ತು ನೀಲಿ ಚಡ್ಡಿ ಧರಿಸಿದ್ದ ಅವರು ತನ್ನ ಬ್ಯಾಟಿಂಗ್ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದರು.
‘‘ಅಭ್ಯಾಸದಲ್ಲಿ ಸಹಾಯ ಮಾಡಿರುವುದಕ್ಕಾಗಿ ಕೃತಜ್ಞತೆಗಳು, ಸಹೋದರ. ನಿಮ್ಮನ್ನು ನೋಡಲು ಯಾವತ್ತೂ ಖುಷಿಯಾಗುತ್ತದೆ’’ ಎಂಬುದಾಗಿ ನಯೀಮ್ ಅಮೀನ್ ರನ್ನು ಉದ್ದೇಶಿಸಿ ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಕೊಹ್ಲಿ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ನಯೀಮ್, ‘‘ನಿಮ್ಮನ್ನು ಭೇಟಿಯಾಗುವುದು ಖುಷಿ ಕೊಡುತ್ತದೆ! ಶೀಘ್ರದಲ್ಲೇ ಭೇಟಿಯಾಗುತ್ತೇನೆ’’ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಗೆ ಕೊಹ್ಲಿ ಭಾರತೀಯ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ. ಸರಣಿಯು ಅಕ್ಟೋಬರ್ 19ರಿಂದ 25ರವರೆಗೆ ನಡೆಯಲಿದೆ. ಅವರು ಆಗಸ್ಟ್ ನಲ್ಲಿ ನಡೆಯಬೇಕಾಗಿದ್ದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆಡಲು ತಂಡಕ್ಕೆ ಮರಳಬೇಕಾಗಿತ್ತು. ಆದರೆ ಆ ಸರಣಿಯು ಮುಂದೂಡಲ್ಪಟ್ಟಿದೆ.
ಕೊಹ್ಲಿ ಕೊನೆಯದಾಗಿ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಆಡಿದ್ದು ಜೂನ್ ನಲ್ಲಿ, ಐಪಿಎಲ್ ಫೈನಲ್ ನಲ್ಲಿ. ಅಲ್ಲಿ ಅವರು 43 ರನ್ ಗಳನ್ನು ಗಳಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಪಡೆಯಲು ನೆರವಾಗಿದ್ದರು.