ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡದ ದಾಖಲೆಯತ್ತ ಒಂದು ನೋಟ
PC : PTI
ಲಂಡನ್: ‘ಕ್ರಿಕೆಟ್ ನ ತವರೂರು’ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಜುಲೈ 10ರಿಂದ ಆರಂಭವಾಗಲಿರುವ ನಿರ್ಣಾಯಕ 3ನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ತಮ್ಮ ತಯಾರಿ ಆರಂಭಿಸಿವೆ. ಎಜ್ಬಾಸ್ಟನ್ ಫಲಿತಾಂಶದ ನಂತರ ಉಭಯ ತಂಡಗಳ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದರತ್ತ ಎಲ್ಲರ ಕಣ್ಣು ನೆಟ್ಟಿವೆ. ಶುಭಮನ್ ಗಿಲ್ ನಾಯಕತ್ವದ ಭಾರತ ತಂಡವು ಇದೇ ಮೊದಲ ಬಾರಿ ಬರ್ಮಿಂಗ್ ಹ್ಯಾಮ್ ನಲ್ಲಿ 336 ರನ್ ಅಂತರದಿಂದ ಭರ್ಜರಿ ಜಯ ಸಾಧಿಸಿ ಸದ್ಯ ಭಾರೀ ಆತ್ಮವಿಶ್ವಾಸದಲ್ಲಿದೆ.
ಲಾರ್ಡ್ಸ್ ಮೈದಾನದಲ್ಲಿ ಭಾರತದ ಒಟ್ಟಾರೆ ದಾಖಲೆಯು ಕಳಪೆಯಾಗಿದ್ದು, 19 ಟೆಸ್ಟ್ ಪಂದ್ಯಗಳ ಪೈಕಿ ಕೇವಲ 3 ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಇತ್ತೀಚೆಗಿನ ವರ್ಷಗಳಲ್ಲಿ ಈ ಪ್ರತಿಷ್ಠಿತ ಕ್ರೀಡಾಂಗಣದಲ್ಲಿ ಭಾರತ ತಂಡವು ತನ್ನ ಪ್ರದರ್ಶನ ಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡಿದೆ.
ಲಾರ್ಡ್ಸ್ ಕ್ರೀಡಾಂಗಣವು ಐತಿಹಾಸಿಕವಾಗಿ ಭಾರತ ತಂಡಕ್ಕೆ ಕಬ್ಬಿಣದ ಕಡಲೆಯಾಗಿದೆ. 1932ರಲ್ಲಿ ಲಾರ್ಡ್ಸ್ನಲ್ಲಿ ತನ್ನ ಮೊದಲ ಪಂದ್ಯವನ್ನಾಡಿದ ನಂತರ ಭಾರತ ತಂಡವು 12 ಪಂದ್ಯಗಳಲ್ಲಿ ಸೋತಿದೆ ಹಾಗೂ 4 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಈ ಮೈದಾನದಲ್ಲಿ ಹಲವು ವರ್ಷಗಳ ಕಾಲ ಭಾರತೀಯ ತಂಡವು ಬ್ಯಾಟಿಂಗ್ ಕುಸಿತ ಹಾಗೂ ಕಳಪೆ ಬೌಲಿಂಗ್ ಪ್ರದರ್ಶನದಿಂದಾಗಿ ಪರದಾಟ ನಡೆಸಿದೆ.
ಆದರೆ ಕಳೆದ ಒಂದು ದಶಕದ ಅವಧಿಯಲ್ಲಿ ಲಾರ್ಡ್ಸ್ ಮೈದಾನದಲ್ಲಿ ಭಾರತದ ಅದೃಷ್ಟದಲ್ಲಿ ನಾಟಕೀಯ ಬದಲಾವಣೆ ಕಂಡುಬಂದಿದೆ. ಇಲ್ಲಿ ಆಡಿರುವ ಹಿಂದಿನ 3 ಪಂದ್ಯಗಳ ಪೈಕಿ 2ರಲ್ಲಿ ಜಯ ಸಾಧಿಸಿದೆ. 2014ರಲ್ಲಿ ಎಂ.ಎಸ್. ಧೋನಿ ನಾಯಕತ್ವದಲ್ಲಿ ಭಾರತ ತಂಡವು ಸೋಲಿನ ಸರಪಳಿಯನ್ನು ತುಂಡರಿಸಿತ್ತು. ಆಗ ಇಶಾಂತ್ ಶರ್ಮಾ 74 ರನ್ಗೆ 7 ವಿಕೆಟ್ ಗಳನ್ನು ಉರುಳಿಸಿ ಆಕರ್ಷಕ ಬೌಲಿಂಗ್ ಪ್ರದರ್ಶಿಸಿ ಭಾರತ ತಂಡವು 95 ರನ್ ಅಂತರದಿಂದ ಗೆಲುವು ದಾಖಲಿಸುವಲ್ಲಿ ನೆರವಾಗಿದ್ದರು. 28 ವರ್ಷಗಳಲ್ಲಿ ಮೊದಲ ಬಾರಿ ಲಾರ್ಡ್ಸ್ನಲ್ಲಿ ಗೆಲುವು ಒಲಿದಿತ್ತು. ಆ ನಂತರ 2018ರಲ್ಲಿ ಇನಿಂಗ್ಸ್ ಅಂತರದ ಗೆಲುವು ಹಾಗೂ 2021ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಸ್ಮರಣೀಯ 151 ರನ್ ಅಂತರದಿಂದ ಗೆಲುವು ಸಾಧಿಸಿತ್ತು.
ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತ ತಂಡದ ವಿರುದ್ಧ ಇಂಗ್ಲೆಂಡ್ ತಂಡದ ಗರಿಷ್ಠ ಸ್ಕೋರ್ 653. ಇಂಗ್ಲೆಂಡ್ ಎದುರು ಭಾರತದ ಗರಿಷ್ಠ ಸ್ಕೋರ್ 454.
ಮುಂಬರುವ ಪಂದ್ಯವು ಕುತೂಹಲ ಭರಿತ ಕ್ರಿಕೆಟ್ ಗೆ ಸಾಕ್ಷಿಯಾಗುವ ಭರವಸೆ ಮೂಡಿಸಿದೆ. ಇಂಗ್ಲೆಂಡ್ ತಂಡವು ವೇಗದ ಬೌಲರ್ ಗಸ್ ಅಟ್ಕಿನ್ಸನ್ ರನ್ನು ಸೇರ್ಪಡೆಗೊಳಿಸಿದೆ. ಜೋಫ್ರಾ ಆರ್ಚರ್ ಆಡುವ 11ರ ಬಳಗಕ್ಕೆ ವಾಪಸಾಗುವ ನಿರೀಕ್ಷೆ ಇದೆ.
ಜಸ್ಪ್ರಿತ್ ಬುಮ್ರಾ ಮರಳಿಕೆಯಿಂದಾಗಿ ಭಾರತ ತಂಡದ ಬೌಲಿಂಗ್ ಕೂಡ ಬಲಿಷ್ಠವಾಗಲಿದೆ. ಬುಮ್ರಾ 2ನೇ ಟೆಸ್ಟ್ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದರು.
ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡವು ಲಾರ್ಡ್ಸ್ ನಲ್ಲಿ ಜಯ ಸಾಧಿಸಿ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸುವ ಗುರಿ ಇಟ್ಟುಕೊಂಡಿದೆ. ಪಿಚ್ ಆರಂಭದಲ್ಲಿ ವೇಗದ ಬೌಲರ್ ಗಳಿಗೆ ನೆರವಾಗಬಹುದು. ಉಭಯ ತಂಡಗಳು ವೇಗದ ಬೌಲರ್ ಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಕ್ರಿಕೆಟ್ ನ ಅತ್ಯಂತ ಪ್ರಸಿದ್ದ ಮೈದಾನದಲ್ಲಿ ರೋಚಕ ಸ್ಪರ್ಧೆಗೆ ವೇದಿಕೆಯೊಂದು ಸಿದ್ಧವಾಗಿದೆ.
ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತದ ದಾಖಲೆ
ಪಂದ್ಯಗಳು: 19
ಗೆಲುವು: 3
ಸೋಲು: 12
ಡ್ರಾ: 4
ಗರಿಷ್ಠ ಸ್ಕೋರ್: 1990ರಲ್ಲಿ ಇಂಗ್ಲೆಂಡ್ ವಿರುದ್ಧ 454 ರನ್
ಕನಿಷ್ಠ ಸ್ಕೋರ್: 1974ರಲ್ಲಿ ಇಂಗ್ಲೆಂಡ್ ವಿರುದ್ಧ 42 ರನ್
ಗರಿಷ್ಠ ವೈಯಕ್ತಿಕ ಸ್ಕೋರ್: 1952ರಲ್ಲಿ ವಿನೂ ಮಂಕಡ್-184 ರನ್
ಶ್ರೇಷ್ಠ ಬೌಲಿಂಗ್: 2014ರಲ್ಲಿ ಇಶಾಂತ್ ಶರ್ಮಾ-7-74