×
Ad

ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪೂರೈಸಿ ಸ್ಟಾರ್ಕ್ ದಾಖಲೆ ಮುರಿದ ಮುಹಮ್ಮದ್ ಶಮಿ

Update: 2025-02-20 19:23 IST

 ಮುಹಮ್ಮದ್ ಶಮಿ | PC : PTI  

ದುಬೈ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್‌ಗಳನ್ನು ಪೂರೈಸುವ ಮೂಲಕ ಇತಿಹಾಸದ ಪುಸ್ತಕದಲ್ಲಿ ತನ್ನ ಹೆಸರು ದಾಖಲಿಸಿದರು.

ಬಾಂಗ್ಲಾದೇಶ ವಿರುದ್ಧ ಭಾರತ ತಂಡ ಗುರುವಾರ ಆಡಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಶಮಿ ಈ ಸಾಧನೆ ಮಾಡಿದರು.

5,126 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಶಮಿ ಅವರು ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಹಾಗೂ ಇತರ ಹಲವು ಲೆಜೆಂಡರಿ ವೇಗದ ಬೌಲರ್‌ಗಳನ್ನು ಹಿಂದಿಕ್ಕಿದರು.

ಎಡಗೈ ವೇಗದ ಬೌಲರ್ ಸ್ಟಾರ್ಕ್ 5,240 ಎಸೆತಗಳಲ್ಲಿ 200 ವಿಕೆಟ್‌ಗಳನ್ನು ಪೂರೈಸಿ ದಾಖಲೆ ನಿರ್ಮಿಸಿದ್ದರು. ಆ ನಂತರ ಪಾಕಿಸ್ತಾನದ ಸ್ಪಿನ್ ಮಾಂತ್ರಿಕ ಸಕ್ಲೇನ್ ಮುಷ್ತಾಕ್ 5,451 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.

ಪಟ್ಟಿಯಲ್ಲಿ ಕ್ರಿಕೆಟ್ ಇತಿಹಾಸದ ಕೆಲವು ಶ್ರೇಷ್ಠ ಬೌಲರ್‌ಗಳಿದ್ದು, ಅವರುಗಳೆಂದರೆ: ಆಸ್ಟ್ರೇಲಿಯದ ದಿಗ್ಗಜ ಬ್ರೆಟ್ ಲೀ(5,640 ಎಸೆತಗಳು), ನ್ಯೂಝಿಲ್ಯಾಂಡ್‌ನ ಸ್ವಿಂಗ್ ಸ್ಪೆಷಲಿಸ್ಟ್ ಟ್ರೆಂಟ್ ಬೌಲ್ಟ್(5,783 ಎಸೆತ)ಹಾಗೂ ಪಾಕಿಸ್ತಾನದ ಲೆಜೆಂಡರಿ ವೇಗಿ ವಕಾರ್ ಯೂನಿಸ್(5,883 ಎಸೆತ)ಅವರಿದ್ದಾರೆ.

►ಐಸಿಸಿ ಸ್ಪರ್ಧಾವಳಿಯಲ್ಲಿ ಗರಿಷ್ಠ ವಿಕೆಟ್: ಝಹೀರ್ ಖಾನ್ ದಾಖಲೆ ಮುರಿದ ಶಮಿ

ಶಮಿ ಅವರು ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದು, ಐಸಿಸಿ ಆಯೋಜಿತ ಸೀಮಿತ ಓವರ್ ಸ್ಪರ್ಧಾವಳಿಗಳಲ್ಲಿ ಭಾರತದ ಪರ ಗರಿಷ್ಠ ವಿಕೆಟ್‌ಗಳನ್ನು ಪಡೆದಿದ್ದಾರೆ. ಶಮಿ ಅವರು ಐಸಿಸಿಯ ಎಲ್ಲ ಸ್ಪರ್ಧೆಗಳಲ್ಲಿ(ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ)ಒಟ್ಟು 74 ವಿಕೆಟ್‌ಗಳನ್ನು ಪಡೆದಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಶಮಿ 53 ರನ್‌ಗೆ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಜಾಕರ್ ಅಲಿ(68 ರನ್)ವಿಕೆಟನ್ನು ಕಬಳಿಸುವ ಮೂಲಕ ಈ ದಾಖಲೆ ನಿರ್ಮಿಸಿದರು.

ಹಿರಿಯ ವೇಗದ ಬೌಲರ್ ಶಮಿ ಅವರು 18 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ 55 ವಿಕೆಟ್‌ಗಳು, 14 ಟಿ-20 ವಿಶ್ವಕಪ್ ಪಂದ್ಯಗಳಲ್ಲಿ 14 ವಿಕೆಟ್‌ಗಳು ಹಾಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿರುವ ಏಕೈಕ ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದೇ ವೇಳೆ, ಶಮಿ ಅವರು ಝಹೀರ್ ಖಾನ್ ಅವರ ಮೈಲಿಗಲ್ಲನ್ನು(71 ವಿಕೆಟ್‌ಗಳು)ಮುರಿದಿದ್ದಾರೆ. ಮಾಜಿ ಎಡಗೈ ವೇಗಿ ಝಹೀರ್ 23 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ 44 ವಿಕೆಟ್‌ಗಳು, 9 ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ 15 ವಿಕೆಟ್‌ಗಳು ಹಾಗೂ 12 ಟಿ-20 ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಕಡಿಮೆ ಎಸೆತಗಳಲ್ಲಿ 200 ಏಕದಿನ ವಿಕೆಟ್ ಪಡೆದ ಬೌಲರ್‌ಗಳು

5,126: ಮುಹಮ್ಮದ್ ಶಮಿ

5,240: ಮಿಚೆಲ್ ಸ್ಟಾರ್ಕ್

5,451: ಸಕ್ಲೇನ್ ಮುಷ್ತಾಕ್

5,640: ಬ್ರೆಟ್ ಲೀ

5,783: ಟ್ರೆಂಟ್ ಬೌಲ್ಟ್

5,883: ವಕಾರ್ ಯೂನಿಸ್

*ಕಡಿಮೆ ಏಕದಿನ ಪಂದ್ಯಗಳಲ್ಲಿ 200 ವಿಕೆಟ್‌ಗಳನ್ನು ಪೂರೈಸಿದ ಬೌಲರ್‌ಗಳು

102: ಮಿಚೆಲ್ ಸ್ಟಾರ್ಕ್

104: ಮುಹಮ್ಮದ್ ಶಮಿ/ಸಕ್ಲೇನ್ ಮುಷ್ತಾಕ್

107: ಟ್ರೆಂಟ್ ಬೌಲ್ಟ್

112: ಬ್ರೆಟ್ ಲೀ

117: ಅಲ್ಲನ್ ಡೊನಾಲ್ಡ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News