×
Ad

ದಿನಕ್ಕೆ ಒಂದೇ ಊಟ: ಇದು ಮುಹಮ್ಮದ್ ಶಮಿ ಫಿಟ್ನೆಸ್ ಮಂತ್ರ!

Update: 2025-02-22 20:36 IST

ಮುಹಮ್ಮದ್ ಶಮಿ | PC : PTI 

ಹೊಸದಿಲ್ಲಿ: ಭಾರತದ ಪ್ರಮುಖ ವೇಗದ ಬೌಲರ್ ಮುಹಮ್ಮದ್ ಶಮಿ ಅವರು ತನ್ನ ಅತ್ಯುತ್ತಮ ಪ್ರದರ್ಶನ ಕಾಯ್ದುಕೊಳ್ಳಲು ನೆರವಾದ ವಿಶಿಷ್ಟ ಫಿಟ್ನೆಸ್ ವಿಧಾನವನ್ನು ಬಹಿರಂಗಪಡಿಸಿದ್ದು, ‘ನಾನು ದಿನಕ್ಕೆ ಒಂದು ಊಟ ಮಾತ್ರ ಸೇವಿಸುತ್ತೇನೆ’ ಎಂದಿದ್ದಾರೆ.

‘‘2015ರ ನಂತರ ನಾನು ದಿನಕ್ಕೆ ಒಂದು ಊಟ ಮಾತ್ರ ಮಾಡುತ್ತಿದ್ದೇನೆ. ಬೆಳಗ್ಗೆ ಉಪಹಾರ ಹಾಗೂ ಮಧ್ಯಾಹ್ನದ ಊಟ ಮಾಡುತ್ತಿಲ್ಲ. ಹೀಗೆ ಮಾಡುವುದು ತುಂಬಾ ಕಷ್ಟಕರ. ಆದರೆ ಒಮ್ಮೆ ನೀವು ಅದಕ್ಕೆ ಒಗ್ಗಿಕೊಂಡರೆ ನಂತರ ಅದು ತುಂಬಾ ಸುಲಭವಾಗುತ್ತದೆ’’ ಎಂದು ನವಜೋತ್ ಸಿಂಗ್ ಸಿಧು ಅವರೊಂದಿಗೆ ‘ಸ್ಟಾರ್ ಸ್ಪೋರ್ಟ್ಸ್’ನಲ್ಲಿ ನಡೆದ ಸಂವಾದದ ವೇಳೆ ಶಮಿ ಹೇಳಿದ್ದಾರೆ.

ಡಯಟ್ ಹಾಗೂ ಫಿಟ್ನೆಸ್ ವಿಚಾರದಲ್ಲಿ ಶಮಿ ಅವರ ಶಿಸ್ತುಬದ್ಧ ವಿಧಾನವು ಅವರ ಇತ್ತೀಚೆಗಿನ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಬಾಂಗ್ಲಾದೇಶ ತಂಡದ ವಿರುದ್ಧ ಗುರುವಾರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಆಡಿರುವ ಮೊದಲ ಪಂದ್ಯದಲ್ಲಿ ಶಮಿ ಐದು ವಿಕೆಟ್ ಗೊಂಚಲು ಪಡೆದಿದ್ದರು. ಏಕದಿನ ಕ್ರಿಕೆಟ್‌ ನಲ್ಲಿ ವೇಗವಾಗಿ 200 ವಿಕೆಟ್ ಪೂರೈಸಿದ ಭಾರತೀಯ ಬೌಲರ್ ಎನಿಸಿಕೊಂಡಿದ್ದರು.

2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ದ ಪಂದ್ಯದ ವೇಳೆ ಪಾದದ ಗಾಯಕ್ಕೆ ಒಳಗಾಗಿದ್ದ ಶಮಿ 14 ತಿಂಗಳು ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಶಸ್ತ್ರಚಿಕಿತ್ಸೆಯ ನಂತರ ಅವರ ಎಡ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡ ಪರಿಣಾಮ ಅವರ ಕ್ರಿಕೆಟ್ ಪುನರಾಗಮನವು ಮತ್ತಷ್ಟು ವಿಳಂಬವಾಯಿತು.

‘‘ಪುನಶ್ಚೇತನ ಶಿಬಿರದಲ್ಲಿದ್ದಾಗ ನನ್ನ ತೂಕ ಹೆಚ್ಚಾಗಿತ್ತು. ಆಗ ನಾನು 9 ಕೆಜಿ ಕಳೆದುಕೊಂಡಿದ್ದೆ. ಸವಾಲು ಹಾಕುವುದು ತುಂಬಾ ಕಷ್ಟಕರ. ನಾನು ಎನ್‌ ಸಿ ಎ ಯಲ್ಲಿದ್ದಾಗ ಕಠಿಣ ಸಮಯ ಎದುರಿಸಿದ್ದೆ. ನನ್ನ ತೂಕ 90 ಕೆಜಿ ತಲುಪಿತ್ತು. ನಾನು ರುಚಿಕರವಾದ ಆಹಾರದ ಬಗ್ಗೆ ಹಂಬಲಿಸುವುದಿಲ್ಲ. ಸಾಮಾನ್ಯವಾಗಿ ತಿನ್ನಬಾರದ ವಸ್ತುಗಳಿಂದ ದೂರ ಇರುತ್ತೇನೆ. ನಾನು ಸಿಹಿ ತಿಂಡಿಗಳಿಂದ ದೂರ ಇರುತ್ತೇನೆ’’ ಎಂದು ಶಮಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News