‘ಅವರು ಏನು ಬೇಕಾದರೂ ಹೇಳಲಿ, ನಾನು ಹೇಗೆ ಬೌಲಿಂಗ್ ಮಾಡಿದ್ದೇನೆಂದು ನೀವು ನೋಡಿದ್ದೀರಿ’: ಮುಹಮ್ಮದ್ ಶಮಿ ಆಕ್ರೋಶ
ಫಿಟ್ನೆಸ್ ಕುರಿತು ಅಜಿತ್ ಅಗರ್ಕರ್ ಹೇಳಿಕೆ
ಮುಹಮ್ಮದ್ ಶಮಿ |Photo Credit : PTI
ಹೊಸದಿಲ್ಲಿ, ಅ.17: ತನ್ನ ಫಿಟ್ನೆಸ್ ವಿಚಾರದ ಕುರಿತು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ಹೇಳಿಕೆಗೆ ನಾನು ಹೆಚ್ಚಿನ ಪ್ರಾಮುಖ್ಯತೆ ನೀಡಿಲ್ಲ ಎಂದು ವೇಗದ ಬೌಲರ್ ಮುಹಮ್ಮದ್ ಶಮಿ ಹೇಳಿದ್ದಾರೆ.
ತನ್ನ ಫಿಟ್ನೆಸ್ ಕುರಿತು ಅಗರ್ಕರ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಶಮಿ, ‘‘ಅವರು ಏನು ಬೇಕಾದರೂ ಹೇಳಲಿ, ನಾನು ಹೇಗೆ ಬೌಲಿಂಗ್ ಮಾಡಿದ್ದೇನೆಂದು ನೀವು ನೋಡಿದ್ದೀರಿ. ಇದೆಲ್ಲವೂ ನಿಮ್ಮ ಕಣ್ಣ ಮುಂದೆಯೇ ಇದೆ’’ ಎಂದರು.
ಶಮಿ ಸದ್ಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಬಂಗಾಳದ ಪರ ಉತ್ತರಾಖಂಡ ತಂಡದ ವಿರುದ್ಧ ಆಡುತ್ತಿದ್ದಾರೆ.
‘‘ಶಮಿ ಅವರು ಇನ್ನೂ ಪೂರ್ಣ ಫಿಟ್ನೆಸ್ ಪಡೆದಿಲ್ಲ’’ಎಂದು 47ರ ವಯಸ್ಸಿನ ಅಗರ್ಕರ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘‘ಶಮಿ ಇಲ್ಲಿದ್ದರೆ ನಾನು ಅವರಿಗೆ ಉತ್ತರ ನೀಡುತ್ತಿದ್ದೆ. ಅವರು ಫಿಟ್ ಇದ್ದರೆ ಶಮಿಯಂತಹ ಬೌಲರ್ ಏಕೆ ಸಿಗುತ್ತಿರಲಿಲ್ಲ?ನಾನು ಅವರೊಂದಿಗೆ ಹಲವು ಬಾರಿ ಮಾತನಾಡಿದ್ದೇನೆ. ಕಳೆದ 6ರಿಂದ 8 ತಿಂಗಳುಗಳಲ್ಲಿ ನಾವು ಕಂಡುಕೊಂಡಿರುವ ಅಂಶವೆಂದರೆ, ಶಮಿ ಫಿಟ್ ಆಗಿರಲಿಲ್ಲ. ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಲು ಅವರು ಫಿಟ್ ಇರಲಿಲ್ಲ’’ ಎಂದು ಹೊಸದಿಲ್ಲಿಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಅಗರ್ಕರ್ ಹೇಳಿದ್ದರು.
ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಕೊನೆಯ ಬಾರಿ ಆಡಿದ್ದ ಶಮಿ ಅವರನ್ನು ಇಂಗ್ಲೆಂಡ್‌ನಲ್ಲಿ ನಡೆದಿದ್ದ 5 ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿಲ್ಲ. ಮುಂಬರುವ ಆಸ್ಟ್ರೇಲಿಯ ವಿರುದ್ಧದ ಬಿಳಿ ಚೆಂಡಿನ ಸರಣಿಯಿಂದಲೂ ಅವರನ್ನು ಹೊರಗಿಡಲಾಗಿದೆ.
ಮೊಣಕಾಲಿನ ಗಾಯದಿಂದಾಗಿ 1 ವರ್ಷಕ್ಕೂ ಅಧಿಕ ಸಮಯದಿಂದ ತಂಡದಿಂದ ಹೊರಗುಳಿದಿದ್ದ ಬಂಗಾಳದ ವೇಗಿ ಶಮಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳಲು ಯತ್ನಿಸುತ್ತಿದ್ದಾರೆ. ಕಳೆದ ವರ್ಷ ರಣಜಿ ಟ್ರೋಫಿ ಹಾಗೂ ವಿಜಯ ಹಝಾರೆ ಟ್ರೋಫಿಯ ವೇಳೆ ಅವರು ತಂಡಕ್ಕೆ ಮರಳಿದ್ದರು. ತವರಿನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ನಡೆದಿದ್ದ ಸರಣಿಯಲ್ಲಿ ಏಕದಿನ ಹಾಗೂ ಟಿ-20 ತಂಡದಲ್ಲಿ ಸ್ಥಾನ ಪಡೆದಿದ್ದರು. ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲೂ ಕಾಣಿಸಿಕೊಂಡಿದ್ದರು.
2025ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 9 ಪಂದ್ಯಗಳನ್ನು ಆಡಿದ್ದ ಶಮಿ ದುಲೀಪ್ ಟ್ರೋಫಿಯ ಮೂಲಕ ದೇಶೀಯ ಕ್ರಿಕೆಟಿಗೆ ಮರಳಿದ್ದರು. ರಣಜಿ ಟ್ರೋಫಿ ತಂಡದಲ್ಲಿ ಶಮಿ ಅವರನ್ನು ಸೇರಿಸಿಕೊಂಡಿದ್ದರೂ ಆಸ್ಟ್ರೇಲಿಯದ ವಿರುದ್ಧ ಮುಂಬರುವ ಸರಣಿಗೆ ಕಡೆಗಣಿಸಲಾಗಿದೆ.
ಕೆಲವು ದಿನಗಳ ಹಿಂದೆ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದ ಶಮಿ, ‘‘ಪಂದ್ಯಗಳನ್ನು ಆಡುವುದು ನನ್ನ ಜವಾಬ್ದಾರಿಯಾಗಿದ್ದು, ತನ್ನ ಫಿಟ್ನೆಸ್ ಬಗ್ಗೆ ಆಯ್ಕೆಗಾರರಿಗೆ ಅಪ್‌ಡೇಟ್ ನೀಡುವುದು ನನ್ನ ಕೆಲಸ ಅಲ್ಲ’’ ಎಂದಿದ್ದರು.