×
Ad

ಏಶ್ಯ ಕಪ್ ಟ್ರೋಫಿ ಕೊಡಲು ಷರತ್ತು ವಿಧಿಸಿದ ಮೊಹ್ಸಿನ್ ನಖ್ವಿ : ವರದಿ

Update: 2025-09-30 21:01 IST

Photo credit: PTI

ದುಬೈ, ಸೆ. 30: ಏಶ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ಅಧ್ಯಕ್ಷ ಹಾಗೂ ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ಮೊಹ್ಸಿನ್ ನಖ್ವಿ ಏಶ್ಯ ಕಪ್ 2025 ಟ್ರೋಫಿಯನ್ನು ತನ್ನ ಹೊಟೇಲ್ ಕೊಠಡಿಗೆ ತೆಗೆದುಕೊಂಡು ಹೋದ ವಿದ್ಯಮಾನವು ಜಾಗತಿಕ ಕ್ರಿಕೆಟ್ ಜಗತ್ತನ್ನು ದಿಗ್ಭ್ರಮೆಗೊಳಿಸಿದೆ. ರವಿವಾರ ನಡೆದ ಪಾಕಿಸ್ತಾನ ತಂಡದ ವಿರುದ್ಧದ ಫೈನಲ್‌ನಲ್ಲಿ ಭಾರತವು ಐದು ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಆದರೆ, ಭಾರತ ತಂಡವು ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದ ನಂತರ, ಅವರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ತೊರೆದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಿಂದ ಹೊರನಡೆದರು. ನಾನು ‘ತಟಸ್ಥ’ ವ್ಯಕ್ತಿಯೊಬ್ಬರಿಂದ ಮಾತ್ರ ಟ್ರೋಫಿಯನ್ನು ಸ್ವೀಕರಿಸುವ ತನ್ನ ನಿಲುವನ್ನು ಭಾರತ ಪುನರುಚ್ಚರಿಸಿತು.

ಫೈನಲ್ ಪಂದ್ಯ ಮುಗಿದು ಎರಡು ದಿನಗಳಾದರೂ, ಭಾರತ ತಂಡಕ್ಕೆ ಟ್ರೋಫಿ ಮತ್ತು ವಿಜೇತರ ಪದಕಗಳನ್ನು ಯಾವಾಗ ಮತ್ತು ಹೇಗೆ ತಲುಪಿಸಲಾಗುವುದು ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದಾಗ್ಯೂ, ಪಾಕಿಸ್ತಾನದ ರಾಜಕೀಯ ವ್ಯಕ್ತಿಯೂ ಆಗಿರುವ ನಖ್ವಿ, ಟ್ರೋಫಿ ಮತ್ತು ಪದಕಗಳನ್ನು ಭಾರತ ತಂಡಕ್ಕೆ ನೀಡಲು ಒಂದು ಷರತ್ತು ವಿಧಿಸಿದ್ದಾರೆ ಎಂದು ‘ಕ್ರಿಕ್ಬಝ’ನ ವರದಿಯೊಂದು ತಿಳಿಸಿದೆ.

ಸೂರ್ಯಕುಮಾರ್ ಯಾದವ್ ಮತ್ತು ಅವರ ತಂಡಕ್ಕೆ ಪದಕಗಳನ್ನು ನೀಡಲು ಒಂದು ಔಪಚಾರಿಕ ಕಾರ್ಯಕ್ರಮವನ್ನು ಆಯೋಜಿಸಬೇಕು ಹಾಗೂ ಆ ಟ್ರೋಫಿ ಮತ್ತು ಪದಕಗಳನ್ನು ತಾನೇ ನೀಡಬೇಕು ಎಂಬುದಾಗಿ ನಖ್ವಿ ಕಾರ್ಯಕ್ರಮದ ಆಯೋಜಕರಿಗೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಗಮನಿಸಿದರೆ ಇಂತಹ ಒಂದು ವ್ಯವಸ್ಥೆಯನ್ನು ಆಯೋಜಿಸುವ ಸಾಧ್ಯತೆ ಕಡಿಮೆ ಎಂಬುದಾಗಿ ಹೇಳಲಾಗಿದೆ.

ನಖ್ವಿ ಟ್ರೋಫಿ ಮತ್ತು ಪದಕಗಳನ್ನು ತನ್ನ ಹೊಟೇಲ್ ಕೊಠಡಿಗೆ ತೆಗೆದುಕೊಂಡು ಹೋದ ಕ್ರಮವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ದೇವಜಿತ್ ಸೈಕಿಯಾ ಈಗಾಗಲೇ ತೀವ್ರವಾಗಿ ಖಂಡಿಸಿದ್ದಾರೆ.

‘‘ನಾವು ಎಸಿಸಿ ಅಧ್ಯಕ್ಷರಿಂದ ಟ್ರೋಫಿಯನ್ನು ಸ್ವೀಕರಿಸದಿರಲು ನಿರ್ಧರಿಸಿದ್ದೇವೆ. ಏಕೆಂದರೆ ಅವರು ಪಾಕಿಸ್ತಾನದ ಪ್ರಮುಖ ನಾಯಕರಲ್ಲಿ ಒಬ್ಬರು. ಆದ್ದರಿಂದ, ನಾವು ಅವರಿಂದ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ’’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಎಎನ್ಐಗೆ ತಿಳಿಸಿದ್ದಾರೆ. ಈ ವಿಷಯವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಕೊಂಡೊಯ್ಯಲು ಬಿಸಿಸಿಐ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

‘‘ನಾವು ಅವರಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂದ ಮಾತ್ರಕ್ಕೆ ಅವರು ಟ್ರೋಫಿ ಮತ್ತು ಪದಕಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುವುದಲ್ಲ. ಇದು ತುಂಬಾ ದುರದೃಷ್ಟಕರ ಮತ್ತು ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ಕೃತ್ಯವಾಗಿದೆ’’ ಎಂದು ಹೇಳಿದ್ದಾರೆ.

‘‘ಟ್ರೋಫಿ ಮತ್ತು ಪದಕಗಳನ್ನು ಶೀಘ್ರವೇ ಭಾರತಕ್ಕೆ ಹಿಂದಿರುಗಿಸಲಾಗುವುದು ಎಂದು ನಾವು ಭಾವಿಸುತ್ತೇವೆ. ಇದನ್ನು ನಾವು ಖಂಡಿತವಾಗಿಯೂ ಪ್ರತಿಭಟಿಸಲಿದ್ದೇವೆ. ನವೆಂಬರ್ ತಿಂಗಳಲ್ಲಿ ದುಬೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ, ಎಸಿಸಿ ಅಧ್ಯಕ್ಷರ ಈ ಕೃತ್ಯದ ವಿರುದ್ಧ ನಾವು ತೀವ್ರವಾದ ಮತ್ತು ಪ್ರಬಲ ಪ್ರತಿಭಟನೆಯನ್ನು ದಾಖಲಿಸಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News