ಸಿರಾಜ್ ಬೌಲಿಂಗನ್ನು ಟೀಕಿಸಿದ ಮುಹಮ್ಮದ್ ಕೈಫ್
ಮುಹಮ್ಮದ್ ಸಿರಾಜ್ | PC : PTI
ಲಂಡನ್: ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 5 ವಿಕೆಟ್ ಗಳ ಅಂತರದಿಂದ ಸೋಲನುಭವಿಸಿದ ಬಳಿಕ, ಮುಹಮ್ಮದ್ ಸಿರಾಜ್‌ರ ಬೌಲಿಂಗ್ ನಿರ್ವಹಣೆಯನ್ನು ಭಾರತದ ಮಾಜಿ ಕ್ರಿಕೆಟಿಗ ಮುಹಮ್ಮದ್ ಕೈಫ್ ಟೀಕಿಸಿದ್ದಾರೆ.
ಲೀಡ್ಸ್‌ನ ಹೆಡಿಂಗ್ಲೆ ಪಿಚ್ ಬೌಲರ್ ಗಳಿಗೆ ಯಾವುದೇ ನೆರವು ನೀಡಲಿಲ್ಲ. ಆದಾಗ್ಯೂ, ಜಸ್‌ಪ್ರಿತ್ ಬುಮ್ರಾ ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್ ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಪ್ರಸಿದ್ಧ ಕೃಷ್ಣ ಮತ್ತು ಮುಹಮ್ಮದ್ ಸಿರಾಜ್ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಗಳನ್ನು ಪಡೆದಿದ್ದರು.
ದ್ವಿತೀಯ ಇನಿಂಗ್ಸ್ ನಲ್ಲಿ ಭಾರತದ ಬೌಲಿಂಗ್ ನಿರ್ವಹಣೆ ಮತ್ತಷ್ಟು ಕುಸಿಯಿತು. ಇಂಗ್ಲೆಂಡ್ ಆರಂಭಿಕರಾದ ಝ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್, 371 ರನ್‌ಗಳ ವಿಜಯದ ಗುರಿಯನ್ನು ಬೆನ್ನಟ್ಟುತ್ತಾ ಮೊದಲ ವಿಕೆಟ್‌ಗೆ 188 ರನ್‌ಗಳ ಭಾಗೀದಾರಿಕೆ ನಿಭಾಯಿಸಿದರು. ಅಂತಿಮವಾಗಿ ಇಂಗ್ಲೆಂಡ್ 5 ವಿಕೆಟ್ ಗಳು ಉಳಿದಿರುವಂತೆಯೇ ಗುರಿಯನ್ನು ತಲುಪಿತು.
ಪ್ರಸಿದ್ಧ ಕೃಷ್ಣ ಮತ್ತು ಶಾರ್ದುಲ್ ಠಾಕೂರ್ ತಲಾ 2 ವಿಕೆಟ್ ಗಳನ್ನು ಉರುಳಿಸಿದ್ದರು. ರವೀಂದ್ರ ಜಡೇಜ 1 ವಿಕೆಟ್ ಪಡೆದರು. ಬುಮ್ರಾ ಮತ್ತು ಸಿರಾಜ್ ಕ್ರಮವಾಗಿ 19 ಮತ್ತು 14 ಓವರ್ ಗಳನ್ನು ಬೌಲ್ ಮಾಡಿದ್ದರೂ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಆ ಪಂದ್ಯದಲ್ಲಿ ಸಿರಾಜ್ 41 ಓವರ್ ಗಳಲ್ಲಿ ಕೇವಲ 2 ವಿಕೆಟ್ ಗಳನ್ನು ಪಡೆದಿದ್ದಾರೆ.
‘‘ಮುಹಮ್ಮದ್ ಸಿರಾಜ್ ಕಠಿಣ ಪ್ರಯತ್ನ ಮಾಡಿದ್ದರು, ಹೃದಯದಿಂದ ಬೌಲ್ ಮಾಡಿದರು ಎಂದು ಜನರು ಹೇಳುತ್ತಾರೆ. ಸರ್, ನಿಮ್ಮ ಹೃದಯದಿಂದ ಬೌಲ್ ಮಾಡಬೇಡಿ, ಲೈನ್ ಮತ್ತು ಲೆಂತ್‌ನೊಂದಿಗೆ ನಿಮ್ಮ ಮನಸ್ಸಿನಿಂದ ಬೌಲ್ ಮಾಡಿ. ಆಗ ನಾವು ವಿಕೆಟ್ ಗಳನ್ನು ಪಡೆಯಬಹುದು’’ ಎಂದು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಕೈಫ್ ಹೇಳಿದ್ದಾರೆ.