ಭಾರತಕ್ಕೆ ಏಶ್ಯ ಕಪ್ ಟ್ರೋಫಿ ಹಸ್ತಾಂತರಿಸಲು ನಿರಾಕರಿಸಿದ ಎಸಿಸಿ ಅಧ್ಯಕ್ಷ ಮುಹ್ಸಿನ್ ನಖ್ವಿ : ಐಸಿಸಿ ಸಭೆಯಲ್ಲಿ ವಿಷಯ ಪ್ರಸ್ತಾವಿಸಲು ಬಿಸಿಸಿಐ ನಿರ್ಧಾರ
ಮುಹ್ಸಿನ್ ನಖ್ವಿ | Photo Credit : PTI
ದುಬೈ, ಅ.21: ಚಾಂಪಿಯನ್ ಭಾರತ ಕ್ರಿಕೆಟ್ ತಂಡಕ್ಕೆ ಈ ತನಕ ಏಶ್ಯ ಕಪ್ ಟ್ರೋಫಿಯನ್ನು ಹಸ್ತಾಂತರಿಸದೇ ಇರುವುದು ವಿವಾದಕ್ಕೆ ಕಾರಣವಾಗಿದೆ. ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿಗಳ ಬೆಂಬಲದೊಂದಿಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಮತ್ತೊಮ್ಮೆ ಮನವಿ ಮಾಡಿದ ಹೊರತಾಗಿಯೂ ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಅಧ್ಯಕ್ಷರಾದ ಪಾಕಿಸ್ತಾನದ ಮುಹ್ಸಿನ್ ನಖ್ವಿ ಟ್ರೋಫಿಯನ್ನು ಹಸ್ತಾಂತರಿಸಲು ನಿರಾಕರಿಸಿದ್ದಾರೆ.
ದುಬೈನಲ್ಲಿರುವ ಎಸಿಸಿ ಪ್ರಧಾನ ಕಚೇರಿಯಿಂದ ಬಿಸಿಸಿಐ ಪ್ರತಿನಿಧಿಯೊಬ್ಬರು ಟ್ರೋಫಿಯನ್ನು ಪಡೆಯಬೇಕು ಎಂದು ನಖ್ವಿ ಒತ್ತಾಯಿಸುತ್ತಿರುವುದರಿಂದ ಬಿಕ್ಕಟ್ಟು ಮುಂದುವರಿದಿದೆ. ಬಿಸಿಸಿಐ, ನಖ್ವಿ ಅವರ ಒತ್ತಾಯಕ್ಕೆ ಮಣಿಯದೆ, ಮುಂಬರುವ ಐಸಿಸಿ ಸಭೆಯಲ್ಲಿ ಈ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಯೋಜಿಸಿದೆ.
‘‘ಭಾರತಕ್ಕೆ ಟ್ರೋಫಿ ಹಸ್ತಾಂತರಿಸುವ ಕುರಿತು ಬಿಸಿಸಿಐ ಕಾರ್ಯದರ್ಶಿ, ಬಿಸಿಸಿಐನ ಎಸಿಸಿ ಪ್ರತಿನಿಧಿ ರಾಜೀವ್ ಶುಕ್ಲಾ, ಶ್ರೀಲಂಕಾ ಕ್ರಿಕೆಟ್ ಹಾಗೂ ಅಫ್ಘಾನಿಸ್ತಾನ ಸೇರಿದಂತೆ ಇತರ ಸದಸ್ಯ ಮಂಡಳಿಗಳ ಪ್ರತಿನಿಧಿಗಳು ಕಳೆದ ವಾರ ಎಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು’’ಎಂದು ಎಸಿಸಿ ಮೂಲವೊಂದು ಪಿಟಿಐಗೆ ತಿಳಿಸಿದೆ.
ಬಿಸಿಸಿಐಯಿಂದ ಯಾರಾದರೊಬ್ಬರು ದುಬೈಗೆ ಬಂದು ಅಧ್ಯಕ್ಷರ ಕೈಯಿಂದ ಟ್ರೋಫಿಯನ್ನು ತೆಗೆದುಕೊಳ್ಳಬೇಕು ಎಂದು ಎಸಿಸಿ ಪ್ರತಿಕ್ರಿಯಿಸಿದೆ. ಹೀಗಾಗಿ ಈ ವಿಷಯ ಇನ್ನೂ ಇತ್ಯರ್ಥವಾಗಿಲ್ಲ. ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂದಿರುವ ಬಿಸಿಸಿಐ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಹೀಗಾಗಿ ಈ ವಿಚಾರವು ಐಸಿಸಿ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ ಎಸಿಸಿ ಮೂಲಗಳು ತಿಳಿಸಿವೆ.
ಏಶ್ಯ ಕಪ್ ಫೈನಲ್ ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಾಂಪಿಯನ್ ಭಾರತ ತಂಡವು ಎಸಿಸಿ ಅಧ್ಯಕ್ಷ ನಖ್ವಿ ಅವರ ಹಸ್ತದಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಆಗ ನಖ್ವಿ ಅವರು ಟ್ರೋಫಿಯೊಂದಿಗೆ ತೆರಳಿದ್ದರು. ಸದ್ಯ ಆ ಟ್ರೋಫಿಯು ಎಸಿಸಿ ಪ್ರಧಾನ ಕಚೇರಿಯಲ್ಲೇ ಉಳಿದಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿರುವ ನಖ್ವಿ ಆ ದೇಶದ ಆಂತರಿಕ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತೀಯ ಕ್ರಿಕೆಟ್ ತಂಡವು ಏಶ್ಯಕಪ್ ಟೂರ್ನಿಯುುದ್ದಕ್ಕೂ ಪಾಕಿಸ್ತಾನಿ ಆಟಗಾರರ ಕೈಕುಲುಕಲು ನಿರಾಕರಿಸಿದ್ದರು. ಮೂರು ವಾರಗಳ ಕಾಲ ನಡೆದಿದ್ದ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ರವಿವಾರದಂದು ಎಲ್ಲ 3 ಪಂದ್ಯಗಳನ್ನು ಆಡಿದ್ದವು.