ನಾರ್ವೆ ಚೆಸ್ | ಗುಕೇಶ್ ಗೆ ಸೋಲು; ಅರ್ಜುನ್ ಗೆ ಜಯ
ಗುಕೇಶ್ - Photo Credit: PTI
ಸ್ಟಾವಂಜರ್: ನಾರ್ವೆ ಚೆಸ್ ನಲ್ಲಿ ಹಾಲಿ ಚಾಂಪಿಯನ್ ಭಾರತದ ಡಿ. ಗುಕೇಶ್ ರ ಏಳು-ಬೀಳಿನ ಪ್ರಯಾಣ ಮುಂದುವರಿದಿದ್ದು, ಅವರು ಶನಿವಾರ ಆರ್ಮಜ್ಡಾನ್ ಟೈಬ್ರೇಕ್ ನಲ್ಲಿ ಸೋಲನುಭವಿಸಿದ್ದಾರೆ.
ಇದರೊಂದಿಗೆ ಅವರು ಜಂಟಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಅದೇ ವೇಳೆ, ಭಾರತದ ಇನ್ನೋರ್ವ ಸ್ಪರ್ಧಿ ಅರ್ಜುನ್ ಎರಿಗಸಿ ಎರಡನೇ ವಿಶ್ವ ರ್ಯಾಂಕಿಂಗ್ ನ ಅಮೆರಿಕದ ಹಿಕರು ನಕಮುರರನ್ನು ಹಿಮ್ಮೆಟ್ಟಿಸಿ ತನ್ನ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಹಾಲಿ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ತನ್ನ ವಿಜಯ ಯಾತ್ರೆಯನ್ನು ಮುಂದುವರಿಸಿದ್ದಾರೆ. ಅಮೆರಿಕದ ಗ್ರಾಂಡ್ ಮಾಸ್ಟರ್ ಫೆಬಿಯಾನೊ ಕರುವಾನ ವಿರುದ್ಧ ಆರ್ಮಜ್ಡಾನ ಟೈ-ಬ್ರೇಕ್ನಲ್ಲಿ ಗೆಲುವು ಸಾಧಿಸಿದ ಬಳಿಕ ಅವರು ತನ್ನ ಅಂಕವನ್ನು 9.5ಕ್ಕೆ ಹೆಚ್ಚಿಸಿಕೊಂಡಿದ್ದಾರೆ.
ಶನಿವಾರ ‘ಓಪನ್’ ವಿಭಾಗದ ಎಲ್ಲಾ ಮೂರು ಪಂದ್ಯಗಳು ಡ್ರಾದಲ್ಲಿ ಮುಕ್ತಾಯಗೊಂಡವು. ಹಾಗಾಗಿ, ಫಲಿತಾಂಶ ನಿರ್ಧರಿಸಲು ಆರ್ಮಜ್ಡಾನ್ ಟೈ-ಬ್ರೇಕ್ ಅಳವಡಿಸಲಾಯಿತು. ಚೀನಾದ ಗ್ರಾಂಡ್ಮಾಸ್ಟರ್ ವೇ ಯಿ ಮಧ್ಯ ಗೇಮ್ ಗೆದ್ದರೆ, ಗುಕೇಶ್ ಕೊನೆ ಗೇಮ್ನಲ್ಲಿ ಜಯ ಗಳಿಸಿದರು. ಆದರೆ, ಕ್ಲಾಸಿಕಲ್ ಗೇಮ್ ಡ್ರಾದಲ್ಲಿ ಮುಕ್ತಾಯಗೊಂಡಿತು. ಬಳಿಕ ನಡೆದ ಟೈಬ್ರೇಕ್ನಲ್ಲಿ ವೇ ಯಿ, ಗುಕೇಶ್ರನ್ನು ಸೋಲಿಸಿದರು.
ಅರ್ಜುನ್ ಎರಿಗಸಿ ಮತ್ತು ನಕಮುರ ನಡುವಿನ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು. ಬಳಿಕ ನಡೆದ ಆರ್ಮಜ್ಡಾನ್ ಟೈಬ್ರೇಕ್ನಲ್ಲಿ ಅರ್ಜುನ್ ವಿಜಯ ಸಾಧಿಸಿದರು.
ಕರುವಾನ ವಿರುದ್ಧ ಆರ್ಮಜ್ಡಾನ್ ಟೈಬ್ರೇಕ್ನಲ್ಲಿ ಗೆಲುವು ಸಾಧಿಸಿದ ಬಳಿಕ, ಕಾರ್ಲ್ಸನ್ 9.5 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಕರುವಾನ 8 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 6.5 ಅಂಕ ಹೊಂದಿರುವ ನಕಮುರ ಮೂರನೇ ಸ್ಥಾನದಲ್ಲಿದ್ದಾರೆ.
► ಕೊನೆರು ಹಂಪಿ ಅಗ್ರಸ್ಥಾನದಲ್ಲಿ
ಮಹಿಳೆಯರ ವಿಭಾಗದಲ್ಲಿ, ಎರಡು ಬಾರಿಯ ವಿಶ್ವ ರ್ಯಾಪಿಡ್ ಚಾಂಪಿಯನ್ ಕೊನೆರು ಹಂಪಿ ಚೀನಾದ ಲೇ ಟಿಂಗ್ಜೈ ಅವರನ್ನು ಟೈಬ್ರೇಕ್ನಲ್ಲಿ ಸೋಲಿಸಿದ್ದಾರೆ. ಇದರೊಂದಿಗೆ ಅವರು 8.5 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಅದೇ ವೇಳೆ, ಆರ್. ವೈಶಾಲಿ ಇರಾನಿಯನ್-ಸ್ಪ್ಯಾನಿಶ್ ಆಟಗಾರ್ತಿ ಸಾರಾ ಖದೀಮ್ರನ್ನು ಸೋಲಿಸಿ ಮೂರು ಅಂಕಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಅವರು ಅಂಕಪಟ್ಟಿಯಲ್ಲಿ 6.5 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.