ಭಾರತೀಯ ಡೇವಿಸ್ ಕಪ್ ತಂಡಕ್ಕೆ ವೀಸಾಗಳನ್ನು ನೀಡಿದ ಪಾಕಿಸ್ತಾನ ಹೈಕಮಿಶನ್
Photo: economictimes.indiatimes.com
ಹೊಸದಿಲ್ಲಿ: ಇಲ್ಲಿನ ಪಾಕಿಸ್ತಾನ ಹೈಕಮಿಶನ್ ಕಚೇರಿಯು ಭಾರತೀಯ ಡೇವಿಸ್ ಕಪ್ ತಂಡಕ್ಕೆ ವೀಸಾಗಳನ್ನು ನೀಡಿದೆ. ಭಾರತೀಯ ತಂಡವು ಫೆಬ್ರವರಿ 3 ಮತ್ತು 4ರಂದು ಇಸ್ಲಾಮಾಬಾದ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಪಾಕಿಸ್ತಾನದ ವಿರುದ್ಧ ಡೇವಿಸ್ ಕಪ್ ವಿಶ್ವ ಗ್ರೂಪ್ ವನ್ ಪ್ಲೇ-ಆಫ್ ಪಂದ್ಯ ಆಡಲಿದೆ.
‘‘ಪಾಕಿಸ್ತಾನ ಮತ್ತು ಭಾರತದ ನಡುವಿನ ಡೇವಿಸ್ ಕಪ್ ವಿಶ್ವ ಗ್ರೂಪ್ ವನ್ ಪ್ಲೇ ಆಫ್ ಪಂದ್ಯದಲ್ಲಿ ಆಡಲು, ಸಹಾಯಕ ಸಿಬ್ಬಂದಿ ಸೇರಿದಂತೆ ಭಾರತೀಯ ಡೇವಿಸ್ ಕಪ್ ತಂಡಕ್ಕೆ ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನ ಹೈಕಮಿಶನ್ ವೀಸಾಗಳನ್ನು ನೀಡಿದೆ’’ ಎಂದು ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನ ಹೈಕಮಿಶನ್ ಹೊರಡಿಸಿರುವ ಹೇಳಿಕೆಯೊಂದು ತಿಳಿಸಿದೆ.
1964ರ ಬಳಿಕ, ಭಾರತೀಯ ಡೇವಿಸ್ ಕಪ್ ತಂಡವು ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆ. 2019ರಲ್ಲಿ ತಟಸ್ಥ ನೆಲದಲ್ಲಿ ನಡೆದ ಕಡೆಯ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 4-0 ಅಂತರದಿಂದ ಸೋಲಿಸಿತ್ತು.
ಅಖಿಲ ಭಾರತ ಟೆನಿಸ್ ಅಸೋಸಿಯೇಶನ್ (ಎಐಟಿಎ) ಪಾಕಿಸ್ತಾನದ ವಿರುದ್ಧದ ಡೇವಿಸ್ ಕಪ್ ಪಂದ್ಯಕ್ಕೆ ಈಗಾಗಲೇ ಆರು ಸದಸ್ಯರು ಟೆನಿಸ್ ತಂಡವನ್ನು ಆಯ್ಕೆ ಮಾಡಿದೆ.
ಮಾಜಿ ಆಟಗಾರ ರೋಹಿತ್ ರಾಜ್ಪಾಲ್ ಭಾರತೀಯ ಡೇವಿಸ್ ಕಪ್ ತಂಡದ ಆಡದ ನಾಯಕನಾಗಿ ಮುಂದುವರಿಯಲಿದ್ದಾರೆ. ಝೀಶಾನ್ ಅಲಿಯನ್ನು ಕೋಚ್ ಆಗಿ ನೇಮಿಸಲಾಗಿದೆ.
ಆದರೆ, ತಂಡದಲ್ಲಿ ಹಿರಿಯ ಆಟಗಾರ ರೋಹನ್ ಬೋಪಣ್ಣ ಇರುವುದಿಲ್ಲ. 43 ವರ್ಷದ ಬೋಪಣ್ಣ ತನ್ನ ಅಂತಿಮ ಡೇವಿಸ್ ಕಪ್ ಪಂದ್ಯವನ್ನು ಕಳೆದ ವರ್ಷದ ಸೆಪ್ಟಂಬರ್ನಲ್ಲಿ ಮೊರೊಕ್ಕೊ ವಿರುದ್ಧ ಆಡಿದ್ದಾರೆ. ಅದನ್ನು ಭಾರತ 4-1ರಿಂದ ಗೆದ್ದಿದೆ.
ಡೇವಿಸ್ ಕಪ್ ತಂಡ: ಯೂಕಿ ಭಾಂಬ್ರಿ, ರಾಮ್ ಕುಮಾರ್ ರಾಮನಾಥನ್, ಎನ್. ಶ್ರೀರಾಮ್ ಬಾಲಾಜಿ, ಸಾಕೇತ್ ಮೈನೇನಿ, ನಿಕಿ ಕಲಿಯಂಡ ಪೂಣಚ್ಚ, ದಿಗ್ವಿಜಯ್ ಎಸ್.ಡಿ., ಪ್ರಜ್ವಲ್ ದೇವ್ (ಮೀಸಲು) ಮತ್ತು ರೋಹಿತ್ ರಾಜ್ಪಾಲ್ (ನಾಯಕ).