×
Ad

ಗುಜರಾತ್, ಗೋವಾ ವಿರುದ್ಧ ನೀರಸ ಪ್ರದರ್ಶನ ; ಕರ್ನಾಟಕ ರಣಜಿ ತಂಡದಲ್ಲಿ ಬದಲಾವಣೆ

Update: 2024-01-23 23:47 IST

ಮೈಸೂರು : ಗುಜರಾತ್ ಹಾಗೂ ಗೋವಾ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡದೆ ಕೇವಲ ಮೂರು ಅಂಕವನ್ನು ಕಲೆ ಹಾಕಿರುವ ಕರ್ನಾಟಕ ತಂಡ ತ್ರಿಪುರಾ(ಜ.26, ಅಗರ್ತಲ) ಹಾಗೂ ರೈಲ್ವೇಸ್(ಫೆ.2, ಸೂರತ್) ವಿರುದ್ಧದ ಮುಂಬರುವ ಪಂದ್ಯಗಳಿಗೆ ತಂಡದಲ್ಲಿ ಬದಲಾವಣೆ ಮಾಡಿದೆ.

ಎಡಗೈ ಸ್ಪಿನ್ನರ್ ಶುಭಾಂಗ್ ಹೆಗ್ಡೆಯವರನ್ನು ತಂಡದಿಂದ ಕೈಬಿಟ್ಟು 17ರ ಹರೆಯದ ಹಾರ್ದಿಕ್ ರಾಜ್ ಗೆ ಮಣೆ ಹಾಕಲಾಗಿದೆ.

ಶುಭಾಂಗ್ ಮೂರು ಪಂದ್ಯಗಳಲ್ಲಿ ಕೇವಲ 6 ವಿಕೆಟ್‌ ಗಳನ್ನು ಪಡೆದಿದ್ದಾರೆ. ಎರಡು ಬಾರಿ ಫುಲ್ಟಾಸ್ ಎಸೆದ ಕಾರಣ ಗೋವಾ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡುವುದರಿಂದ ಅಮಾನತುಗೊಂಡಿದ್ದರು.

ಬೌಲಿಂಗ್ ಆಲ್ರೌಂಡರ್ ಹಾರ್ದಿಕ್ ಕರ್ನಾಟಕವು ಮೊದಲ ಬಾರಿ 19 ವರ್ಷದೊಳಗಿನವರ ಕೂಚ್ ಬಿಹಾರ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟೂರ್ನಿಯಲ್ಲಿ ಎರಡು ಬಾರಿ ಐದು ವಿಕೆಟ್ ಗೊಂಚಲು ಸಹಿತ 8 ಪಂದ್ಯಗಳಲ್ಲಿ ಒಟ್ಟು 28 ವಿಕೆಟ್‌ ಗಳನ್ನು ಕಬಳಿಸಿದ್ದರು. ತಮಿಳುನಾಡು ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ಶತಕ ಗಳಿಸಿ ತಂಡದ ಗೆಲುವಿಗೆ ನೆರವಾಗಿದ್ದರು.

ಇನ್ನೋರ್ವ ಹೊಸ ಆಟಗಾರ ಕೆ.ವಿ. ಅನೀಶ್ ಗಾಯಗೊಂಡಿರುವ ಮನೀಶ್ ಪಾಂಡೆ ಬದಲಿಗೆ ಆಯ್ಕೆಯಾಗಿದ್ದಾರೆ. 22ರ ಹರೆಯದ ಅಗ್ರ ಸರದಿಯ ಬ್ಯಾಟರ್ ಅನೀಶ್ ಈಗ ನಡೆಯುತ್ತಿರುವ ಕರ್ನಲ್ ಸಿ.ಕೆ.ನಾಯ್ಡು(ಅಂಡರ್-23)ಟ್ರೋಫಿಯಲ್ಲಿ ಎರಡು ಪಂದ್ಯಗಳಲ್ಲಿ 2 ಶತಕ ಗಳಿಸಿದ್ದರು. ಎಡಗೈ ಮಧ್ಯಮ ವೇಗದ ಬೌಲರ್ ಅಭಿಲಾಶ್ ಶೆಟ್ಟಿ ಗಾಯಗೊಂಡಿರುವ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕದ ರಣಜಿ ತಂಡ: ಮಯಾಂಕ್ ಅಗರ್ವಾಲ್(ನಾಯಕ), ಆರ್. ಸಮರ್ಥ್, ದೇವದತ್ತ ಪಡಿಕ್ಕಲ್, ನಿಕಿನ್ ಜೋಸ್, ಶರತ್ ಶ್ರೀನಿವಾಸ್, ವಿ.ವೈಶಾಕ್, ವಿ.ಕೌಶಿಕ್, ಕೆ.ಶಶಿಕುಮಾರ್, ಸುಜಯ್ ಸತೇರಿ, ಡಿ.ನಿಶ್ಚಲ್, ಎಂ.ವೆಂಕಟೇಶ್, ಕಿಶನ್ ಎಸ್. ಬೆಡಾರೆ, ರೋಹಿತ್ ಕುಮಾರ್, ಅಭಿಲಾಶ್ ಶೆಟ್ಟಿ, ಕೆ.ವಿ. ಅನೀಶ್, ಹಾರ್ದಿಕ್ ರಾಜ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News