ಭರ್ಜರಿ ಫಾರ್ಮ್‌ನಲ್ಲಿರುವ ಕ್ವಿಂಟನ್ ಡಿಕಾಕ್
Photo: instagram/qdk_12
ಚೆನ್ನೈ : ಬ್ಯಾಟರ್‌ಗಳ ಪೈಕಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಎಡಗೈ ಓಪನರ್ ಈಗ ನಡೆಯುತ್ತಿರುವ ಟೂರ್ನಿಯಲ್ಲಿ ಟಾಪ್ ಸ್ಕೋರರ್ (5 ಪಂದ್ಯಗಳಲ್ಲಿ 407 ರನ್) ಆಗಿದ್ದಾರೆ. ಟೂರ್ನಿಯಲ್ಲಿ ಮೂರು ಶತಕಗಳನ್ನು ಗಳಿಸಿರುವ ಏಕೈಕ ಬ್ಯಾಟರ್ ಆಗಿದ್ದಾರೆ.
ದಕ್ಷಿಣ ಆಫ್ರಿಕಾದ ಹಂಗಾಮಿ ನಾಯಕ ಐಡೆನ್ ಮಾರ್ಕ್ರಮ್ ಹಾಗೂ ಹೆನ್ರಿಕ್ ಕ್ಲಾಸೆನ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಇತರ ಇಬ್ಬರು ಪ್ರಮುಖ ಆಟಗಾರರಾಗಿದ್ದಾರೆ. ಮಾರ್ಕ್ರಮ್ 5 ಪಂದ್ಯಗಳಲ್ಲಿ ಒಂದು ಶತಕ ಹಾಗೂ 2 ಅರ್ಧಶತಕಗಳ ಸಹಿತ ಒಟ್ಟು 265 ರನ್ ಗಳಿಸಿದ್ದಾರೆ. ಕ್ಲಾಸೆನ್ 150.79ರ ಸ್ಟ್ರೈಕ್‌ರೇಟ್‌ನಲ್ಲಿ 5 ಪಂದ್ಯಗಳಲ್ಲಿ ಒಟ್ಟು 288 ರನ್ ಗಳಿಸಿದ್ದಾರೆ.
ಪಾಕಿಸ್ತಾನದ ಮುಹಮ್ಮದ್ ರಿಝ್ವಾನ್ ಉತ್ತಮ ಫಾರ್ಮ್‌ನಲ್ಲಿರುವ ಇನ್ನೋರ್ವ ಆಟಗಾರನಾಗಿದ್ದಾರೆ. ವಿಕೆಟ್‌ಕೀಪರ್-ಬ್ಯಾಟರ್ ಈ ತನಕ 5 ಪಂದ್ಯಗಳಲ್ಲಿ ಒಟ್ಟು 302 ರನ್ ಗಳಿಸಿದ್ದಾರೆ. ರಿಝ್ವಾನ್ ಶ್ರೀಲಂಕಾ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್(ಔಟಾಗದೆ 131)ಗಳಿಸಿದ್ದರು.
ರಿಝ್ವಾನ್ ಸಹ ಆಟಗಾರ ಅಬ್ದುಲ್ಲಾ ಶಫೀಕ್ ಪಾಕಿಸ್ತಾನಕ್ಕೆ ಬಿರುಸಿನ ಆರಂಭ ಒದಗಿಸಲು ಯತ್ನಿಸುತ್ತಿದ್ದಾರೆ. ಶಫೀಕ್ 4 ಪಂದ್ಯಗಳಲ್ಲಿ ಒಟ್ಟು 255 ರನ್ ಕಲೆ ಹಾಕಿದ್ದಾರೆ. ಶ್ರೀಲಂಕಾ ವಿರುದ್ಧ 113 ರನ್ ಗಳಿಸಿದ ನಂತರ ಆಸ್ಟ್ರೇಲಿಯ(64 ರನ್) ಹಾಗೂ ಅಫ್ಘಾನಿಸ್ತಾನ(58 ರನ್) ವಿರುದ್ಧ ಅರ್ಧಶತಕ ಗಳಿಸಿದ್ದರು.
ಆಲ್‌ರೌಂಡರ್ ವಿಭಾಗದಲ್ಲಿ ಮಾರ್ಕೊ ಜಾನ್ಸನ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಮೂಲಕ ದಕ್ಷಿಣ ಆಫ್ರಿಕಾವು 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆಲ್ಲಲು ನೆರವಾಗಿದ್ದಾರೆ. ಮಾರ್ಕೊ 5 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಉರುಳಿಸಿದ್ದಲ್ಲದೆ, 123 ರನ್ ಗಳಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಕಾಗಿಸೊ ರಬಾಡ ಪ್ರಸಕ್ತ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಪರ ಗರಿಷ್ಠ ವಿಕೆಟ್‌ಗಳನ್ನು ಪಡೆದಿದ್ದಾರೆ. ಪಾಕಿಸ್ತಾನದ ವಿರುದ್ಧ ರಬಾಡ ಆಫ್ರಿಕಾದ ಪ್ರಮುಖ ಅಸ್ತ್ರವಾಗಿದ್ದಾರೆ. ರಬಾಡ 5 ಪಂದ್ಯಗಳಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಶಾಹೀನ್ ಶಾ ಅಫ್ರಿದಿ 5 ಪಂದ್ಯಗಳಲ್ಲಿ ಒಟ್ಟು 10 ವಿಕೆಟ್‌ಗಳನ್ನು ಉರುಳಿಸಿ ಪಾಕಿಸ್ತಾನದ ಪರ ಗರಿಷ್ಠ ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನವು ದಕ್ಷಿಣ ಆಫ್ರಿಕಾದ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಬೇಧಿಸಲು ಎಡಗೈ ವೇಗಿ ಪ್ರಮುಖ ಪಾತ್ರವಹಿಸಬೇಕಾಗುತ್ತದೆ. ಬಲಗೈ ಮಧ್ಯಮ ವೇಗಿ ಹಸನ್ ಅಲಿ 5 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಪಡೆದಿದ್ದಾರೆ.