×
Ad

ಭಾರತದ ಎದುರು ನೆಲಕ್ಕಚ್ಚಿದ ವಿಂಡೀಸ್; ಗಿಲ್ ಪಡೆಗೆ ಭರ್ಜರಿ ಗೆಲುವು

ಇನಿಂಗ್ಸ್ ಮತ್ತು 140 ರನ್‌ಗಳಿಂದ ಗೆದ್ದ ಭಾರತ

Update: 2025-10-04 14:53 IST

Photo credit: PTI

ಅಹಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯವು ನಿರೀಕ್ಷೆಯಂತೆ ಮೂರನೇ ದಿನದಲ್ಲೇ ಅಂತ್ಯಗೊಂಡಿತು. ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಭಾರತವು ವಿಂಡೀಸ್ ತಂಡವನ್ನು ಇನ್ನಿಂಗ್ಸ್ ಮತ್ತು 140 ರನ್‌ಗಳಿಂದ ಸೋಲಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವಿಂಡೀಸ್ ಬ್ಯಾಟರ್‌ಗಳು ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದರು. ಯಾವೊಬ್ಬರೂ ಭಾರತೀಯ ಬೌಲರ್‌ಗಳ ಎದುರು ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗಲಿಲ್ಲ. ಭಾರತ ಪರ ಮೂರು ಶತಕಗಳು ದಾಖಲಾಗಿದ್ದರೆ, ವೆಸ್ಟ್ ಇಂಡೀಸ್ ಪರ ಎರಡೂ ಇನ್ನಿಂಗ್ಸ್‌ ಸೇರಿ ಒಂದು ಅರ್ಧ ಶತಕವೂ ಬರಲಿಲ್ಲ.

ಎರಡನೇ ದಿನದ ಅಂತ್ಯಕ್ಕೆ ಭಾರತವು ಐದು ವಿಕೆಟ್‌ ಕಳೆದುಕೊಂಡು 448 ರನ್‌ ಗಳಿಸಿತ್ತು. ಮೂರನೇ ದಿನ ಬೆಳಿಗ್ಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ಬಳಿಕ, ವಿಂಡೀಸ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 146 ರನ್‌ ಗಳಲ್ಲೇ ಕುಸಿತ ಕಂಡಿತು.

286 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಪ್ರಾರಂಭಿಸಿದ ವಿಂಡೀಸ್ ಮತ್ತೆ ಅಸ್ತವ್ಯಸ್ತವಾಯಿತು. ತಂಡದ ಮೊತ್ತ 12 ರನ್‌ ಆಗುವಷ್ಟರಲ್ಲಿ ಸಿರಾಜ್ ಚಂದ್ರಪಾಲ್‌ರನ್ನು ಔಟ್ ಮಾಡಿದರು. ಕ್ಯಾಂಪ್‌ಬೆಲ್‌ (14), ಬ್ರ್ಯಾಂಡನ್ ಕಿಂಗ್‌ (5), ನಾಯಕ ರೋಸ್ಟನ್ ಚೇಸ್ ಮತ್ತು ಶಾಯ್ ಹೋಪ್ ತಲಾ ಒಂದು ರನ್‌ ಮಾಡಿ ಪೆವಿಲಿಯನ್ ಸೇರಿದರು.

ಭಾರತದ ಪರ ಮುಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಜಡೇಜಾ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಸಿರಾಜ್ ಮೂರು, ಕುಲದೀಪ್ ಯಾದವ್ ಎರಡು ಮತ್ತು ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಕಿತ್ತರು.

ಈ ಗೆಲುವಿನೊಂದಿಗೆ ಶುಭಮನ್ ಗಿಲ್ ನೇತೃತ್ವದ ಭಾರತವು ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News