×
Ad

ಟೆಸ್ಟ್ ಕ್ರಿಕೆಟ್‌ ನಲ್ಲಿ 4,000 ರನ್, 300 ವಿಕೆಟ್; ರವೀಂದ್ರ ಜಡೇಜ ಐತಿಹಾಸಿಕ ಸಾಧನೆ

Update: 2025-11-15 21:05 IST

ರವೀಂದ್ರ ಜಡೇಜ | Photo Credit :PTI

ಕೋಲ್ಕತಾ, ನ.15: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಟೆಸ್ಟ್ ಕ್ರಿಕೆಟ್‌ ನಲ್ಲಿ 4,000ಕ್ಕೂ ಅಧಿಕ ರನ್ ಗಳಿಸಿರುವ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 4,000 ರನ್ ಹಾಗೂ 300 ವಿಕೆಟ್‌ ಗಳನ್ನು ಕಬಳಿಸಿ ಅವಳಿ ಸಾಧನೆ ಮಾಡಿದ ನಾಲ್ಕನೇ ಕ್ರಿಕೆಟಿಗ ಎನಿಸಿಕೊಂಡಿರುವ ಜಡೇಜ ಅವರು ಇಯಾನ್ ಬೋಥಂ, ಕಪಿಲ್ ದೇವ್ ಹಾಗೂ ಡೇನಿಯಲ್ ವೆಟೋರಿ ಅವರನ್ನೊಳಗೊಂಡ ಎಲೈಟ್ ಕಂಪೆನಿಗೆ ಸೇರಿದ್ದಾರೆ.

ಮೊದಲ ಟೆಸ್ಟ್‌ನ 2ನೇ ದಿನವಾದ ಶನಿವಾರ ಭಾರತದ ಮೊದಲ ಇನಿಂಗ್ಸ್‌ ನ 44ನೇ ಓವರ್ ನಲ್ಲಿ 10 ರನ್ ಗಳಿಸಿದ ಜಡೇಜ ಈ ಮಹತ್ವದ ಮೈಲಿಗಲ್ಲು ತಲುಪಿದರು. ಜಡೇಜ 87 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದರು. ಇಯಾನ್ ಬೋಥಂ(72 ಟೆಸ್ಟ್)ನಂತರ ವೇಗವಾಗಿ ಈ ಸಾಧನೆ ಮಾಡಿದ ಎರಡನೇ ಕ್ರಿಕೆಟಿಗನೆಂಬ ಹಿರಿಮೆಗೆ ಪಾತ್ರರಾದರು.

ಎಲೈಟ್ ಗುಂಪಿನಲ್ಲಿರುವ ಇತರ ಮೂವರು ಕ್ರಿಕೆಟಿಗರ ಅಂಕಿ-ಅಂಶವು ಪರಿಣಾಮಕಾರಿಯಾಗಿದೆ. ಬೋಥಮ್ 5,200 ರನ್ ಹಾಗೂ 383 ವಿಕೆಟ್‌ ಗಳೊಂದಿಗೆ ತಮ್ಮ ವೃತ್ತಿಜೀವನ ಕೊನೆಗೊಳಿಸಿದರು. ಕಪಿಲ್ ದೇವ್ 131 ಪಂದ್ಯಗಳಲ್ಲಿ ಒಟ್ಟು 5,248 ರನ್ ಹಾಗೂ 434 ವಿಕೆಟ್‌ ಗಳನ್ನು ಕಬಳಿಸಿದರು. ವೆಟೋರಿ 113 ಪಂದ್ಯಗಳಲ್ಲಿ 4,531 ರನ್ ಹಾಗೂ 362 ವಿಕೆಟ್‌ ಗಳೊಂದಿಗೆ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದರು.

ಜಡೇಜ ಟೆಸ್ಟ್ ವೃತ್ತಿಜೀವನದ ಬ್ಯಾಟಿಂಗ್ ವಿಭಾಗದಲ್ಲಿ 88 ಪಂದ್ಯಗಳಲ್ಲಿ ಆರು ಶತಕಗಳು ಹಾಗೂ 27 ಅರ್ಧಶತಕಗಳ ಸಹಿತ ಒಟ್ಟು 4,017 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ 25.25ರ ಸರಾಸರಿಯಲ್ಲಿ 15 ಐದು ವಿಕೆಟ್ ಗೊಂಚಲುಗಳ ಸಹಿತ ಒಟ್ಟು 342 ವಿಕೆಟ್‌ ಗಳನ್ನು ಪಡೆದಿದ್ದಾರೆ.

ಇದೇ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಕೂಡ ಟೆಸ್ಟ್ ಕ್ರಿಕೆಟ್‌ ನಲ್ಲಿ 4,000 ರನ್ ಪೂರೈಸಿದರು. ಈ ಮೈಲಿಗಲ್ಲು ತಲುಪಿದ ಭಾರತದ 18ನೇ ಬ್ಯಾಟರ್ ಎನಿಸಿಕೊಂಡರು. ರಾಹುಲ್ ತನ್ನ ಚೊಚ್ಚಲ ಪಂದ್ಯ ಆಡಿದ 3,977 ದಿನಗಳ ನಂತರ ಈ ಸಾಧನೆ ಮಾಡಿದರು. ಮೊಹಿಂದರ್ ಅಮರನಾಥ್(6,214 ದಿನಗಳು)ನಂತರ ನಿಧಾನಗತಿಯಲ್ಲಿ ನಾಲ್ಕು ಸಾವಿರ ರನ್ ಪೂರೈಸಿದ ಭಾರತದ 2ನೇ ಬ್ಯಾಟರ್ ಆಗಿದ್ದಾರೆ.

ರಾಹುಲ್ 40ನೇ ಓವರ್ ನಲ್ಲಿ 119 ಎಸೆತಗಳಲ್ಲಿ 39 ರನ್ ಗಳಿಸಿ ಔಟಾದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News