ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ರಿಷಭ್ ಪಂತ್ ಜೀವನಶ್ರೇಷ್ಠ ಸಾಧನೆ
ರಿಷಭ್ ಪಂತ್ | PC : X
ಹೊಸದಿಲ್ಲಿ: ಹೆಡ್ಡಿಂಗ್ಲೆಯಲ್ಲಿ ಮಂಗಳವಾರ ಕೊನೆಗೊಂಡಿರುವ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತ ಕ್ರಿಕೆಟ್ ತಂಡದ ರಿಷಭ್ ಪಂತ್ ಹಾಗೂ ಇಂಗ್ಲೆಂಡ್ ನ ಆರಂಭಿಕ ಬ್ಯಾಟರ್ ಬೆನ್ ಡಕೆಟ್ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ಹೆಡ್ಡಿಂಗ್ಲೆಯಲ್ಲಿ ಅವಳಿ ಶತಕಗಳನ್ನು ಸಿಡಿಸಿ ಇತಿಹಾಸ ನಿರ್ಮಿಸಿದ್ದ ರಿಷಭ್ ಪಂತ್ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ 7ನೇ ಸ್ಥಾನಕ್ಕೇರಿದರು. ವಿಕೆಟ್ ಕೀಪರ್-ಬ್ಯಾಟರ್ ಪಂತ್ 134 ಹಾಗೂ 118 ರನ್ ಗಳಿಸಿದ್ದು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ 2ನೇ ವಿಕೆಟ್ ಕೀಪರ್ ಎನಿಸಿಕೊಂಡಿದ್ದರು. 2001ರಲ್ಲಿ ಝಿಂಬಾಬ್ವೆಯ ಆ್ಯಂಡಿ ಫ್ಲವರ್ ಈ ಸಾಧನೆ ಮಾಡಿದ್ದರು.
ಟೆಸ್ಟ್ ಇತಿಹಾಸದಲ್ಲಿ ಪಂತ್ ಅವರು 800 ರೇಟಿಂಗ್ ಪಾಯಿಂಟ್ಸ್ ಪಡೆದ ಭಾರತದ ಮೊದಲ ವಿಕೆಟ್ ಕೀಪರ್-ಬ್ಯಾಟರ್ ಎನಿಸಿಕೊಂಡಿದ್ದಾರೆ.
ಜೋ ರೂಟ್ ಅವರು ವಿಶ್ವದ ನಂ.1 ಟೆಸ್ಟ್ ಬ್ಯಾಟರ್ ಆಗಿ ಮುಂದುವರಿದಿದ್ದಾರೆ. ರೂಟ್ ಅವರ ಸಹ ಆಟಗಾರ ಹ್ಯಾರಿ ಬ್ರೂಕ್ 2ನೇ ಸ್ಥಾನದಲ್ಲಿದ್ದಾರೆ. ಭಾರತ ತಂಡದ ನಾಯಕ ಶುಭಮನ್ ಗಿಲ್ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಗಳಿಸಿದ ನಂತರ 5 ಸ್ಥಾನ ಮೇಲಕ್ಕೇರಿ 20ನೇ ಸ್ಥಾನ ತಲುಪಿದರು.
ಭಾರತ ತಂಡದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಹೆಡ್ಡಿಂಗ್ಲೆಯಲ್ಲಿ ಐದು ವಿಕೆಟ್ ಗೊಂಚಲು ಪಡೆದ ನಂತರ ವಿಶ್ವದ ನಂ.1 ಬೌಲರ್ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಕೊಡುಗೆ ನೀಡಿರುವ ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್, ಮೂರು ಸ್ಥಾನ ಮೇಲಕ್ಕೇರಿ ಆಲ್‌ರೌಂಡರ್‌ಗಳ ರ‍್ಯಾಂಕಿಂಗ್ ನಲ್ಲಿ 5ನೇ ಸ್ಥಾನಕ್ಕೇರಿದ್ದಾರೆ.
ನೆದರ್‌ಲ್ಯಾಂಡ್ಸ್, ನೇಪಾಳ ಹಾಗೂ ಸ್ಕಾಟ್‌ಲ್ಯಾಂಡ್ ಒಳಗೊಂಡ ಗ್ಲಾಸ್ಗೊದಲ್ಲಿ ನಡೆದ ತ್ರಿಕೋನ ಸರಣಿಯ ನಂತರ ಟಿ-20 ರ‍್ಯಾಂಕಿಂಗ್ ನಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಸ್ಥಿರ ಪ್ರದರ್ಶನ ನೀಡಿರುವ ಡಚ್ ಬ್ಯಾಟರ್ ಮೈಕಲ್ ಲೆವಿಟ್ 16 ಸ್ಥಾನಗಳಲ್ಲಿ ಭಡ್ತಿ ಪಡೆದು 14ನೇ ಸ್ಥಾನ ತಲುಪಿದ್ದಾರೆ. ಸ್ಕಾಟ್‌ಲ್ಯಾಂಡ್ ನ ಬ್ರೆಂಡನ್ ಮೆಕ್‌ಮುಲ್ಲನ್ 20 ಸ್ಥಾನ ಮೇಲಕ್ಕೇರಿ 38ನೇ ಸ್ಥಾನ ತಲುಪಿದ್ದಾರೆ.