×
Ad

ರಣಜಿಗೆ ರಿಷಭ್ ಪಂತ್ ಮರಳುವ ಸಾಧ್ಯತೆ

Update: 2025-10-06 21:36 IST

 ರಿಷಭ್ ಪಂತ್ | Photo Credit : PTI  

ಹೊಸದಿಲ್ಲಿ, ಅ.6: ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಅಕ್ಟೋಬರ್‌ನ ಕೊನೆಯ ವಾರದಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳುವ ಸಾಧ್ಯತೆಯಿದೆ.

ಮುಂದಿನ ವಾರ ಸೆಂಟರ್ ಆಫ್ ಎಕ್ಸಲೆನ್ಸ್‌ನ(ಸಿಒಇ)ಬಿಸಿಸಿಐನ ವೈದ್ಯಕೀಯ ತಂಡವು ಪಂತ್ ಅವರ ಬಲಗಾಲನ್ನು ಪರೀಕ್ಷಿಸುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

‘‘ಅ.10ರಂದು ಪಂತ್ ಅವರು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗುವ ನಿರೀಕ್ಷೆ ಇದೆ. ಬಿಸಿಸಿಐ ವೈದ್ಯಕೀಯ ತಂಡವು ಪಂತ್ ಕುರಿತು ನಿಗಾ ವಹಿಸಿದೆ’’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ರಣಜಿ ಟ್ರೋಫಿ ಟೂರ್ನಿಯಲ್ಲಿ ದಿಲ್ಲಿ ತಂಡದ ಪರ ಆಡುವ ಕುರಿತಂತೆ ಪಂತ್ ಅವರು ದಿಲ್ಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಹನ್ ಜೇಟ್ಲಿಗೆ ಮನವರಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅ.25ರಿಂದ ದಿಲ್ಲಿಯಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಪಂದ್ಯಗಳಿಗೆ ತಾನು ಲಭ್ಯವಿದ್ದೇನೆ. ಇದು ಫಿಟ್ನೆಸ್ ಹಾಗೂ ಬಿಸಿಸಿಐ ವೈದ್ಯಕೀಯ ತಂಡದಿಂದ ಪಡೆಯಲಿರುವ ಅನುಮತಿಯನ್ನು ಅವಲಂಬಿಸಿದೆ ಎಂದು ಪಂತ್ ತಿಳಿಸಿದ್ದಾಗಿ ಡಿಡಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜುಲೈನ ಕೊನೆಯ ವಾರದಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ವೇಳೆ ಪಂತ್ ಕಾಲ್ಬೆರಳಿನ ಗಾಯಕ್ಕೆ ಒಳಗಾಗಿದ್ದು, ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ ಮುಂಬರುವ ಆಸ್ಟ್ರೇಲಿಯ ವಿರುದ್ಧ ಸೀಮಿತ ಓವರ್ ಕ್ರಿಕೆಟ್ ಸರಣಿ ಹಾಗೂ ಈಗ ನಡೆಯುತ್ತಿರುವ ವೆಸ್ಟ್‌ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ವಂಚಿತರಾಗಿದ್ದಾರೆ.

ಭಾರತ ತಂಡವು ನವೆಂಬರ್‌ನಲ್ಲಿ 14ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ನ.5ರ ತನಕ ಪಂತ್ ಅವರು 2 ರಣಜಿ ಪಂದ್ಯಗಳನ್ನು ಆಡಬಹುದು. ಪಂತ್ ಅವರು ಎಷ್ಟು ರಣಜಿ ಪಂದ್ಯಗಳನ್ನು ಆಡಲಿದ್ದಾರೆ ಎನ್ನುವುದು ಸಿಒಇಯಿಂದ ಪಡೆಯುವ ಅನುಮತಿಯನ್ನು ಅವಲಂಬಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News