×
Ad

ರಿಷಭ್ ಪಂತ್‌ ರಿಂದ ವೆಂಕಟೇಶ್ ಅಯ್ಯರ್ ತನಕ; ಕೋಟಿ ರೂ. ಪಡೆದವರಿಂದ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ

Update: 2025-05-06 21:17 IST

ವೆಂಕಟೇಶ್ ಅಯ್ಯರ್ , ರಿಷಭ್ ಪಂತ್‌ | PTI

ಹೊಸದಿಲ್ಲಿ: ಪ್ಲೇ ಆಫ್‌ನಲ್ಲಿ ಸ್ಥಾನ ಗಿಟ್ಟಿಸಲು ತಂಡಗಳ ನಡುವೆ ತೀವ್ರ ಪೈಪೋಟಿ ಆರಂಭವಾಗಿದ್ದು, ಇದೀಗ 2025ರ ಆವೃತ್ತಿಯ ಐಪಿಎಲ್ ಟೂರ್ನಿಯು ಕೊನೆಯ ಹಂತ ತಲುಪಿದೆ. ಕೆಲವು ಪ್ರಮುಖ ಆಟಗಾರರು ತಮಗೆ ಫಾಂಚೈಸಿಗಳಿಂದ ಲಭಿಸಿರುವ ಕೋಟ್ಯಂತರ ರೂಪಾಯಿ ಸಂಭಾವನೆಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ.

18ನೇ ಆವೃತ್ತಿಯ ಐಪಿಎಲ್‌ನಲ್ಲಿ ಈ ತನಕ ಫ್ಲಾಪ್ ಶೋ ನೀಡಿರುವ 11 ಆಟಗಾರರತ್ತ ಒಂದು ನೋಟ ಇಲ್ಲಿದೆ.

ಆರಂಭಿಕ ಆಟಗಾರರು:

ರಾಹುಲ್ ತ್ರಿಪಾಠಿ ಹಾಗೂ ರಚಿನ್ ರವೀಂದ್ರ

ಈ ಇಬ್ಬರೂ ಆರಂಭಿಕ ಆಟಗಾರರು ಸಿಎಸ್‌ಕೆ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

► ರಾಹುಲ್ ತ್ರಿಪಾಠಿ(3.4 ಕೋ.ರೂ.): ಒಟ್ಟು 5 ಪಂದ್ಯಗಳನ್ನು ಆಡಿರುವ ತ್ರಿಪಾಠಿ 11ರ ಸರಾಸರಿಯಲ್ಲಿ 96.49ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 55 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ ಕೇವಲ 23.

► ರಚಿನ್ ರವೀಂದ್ರ(4 ಕೋ.ರೂ.): ಸಾಧಾರಣ ಆರಂಭ ಪಡೆದ ಹೊರತಾಗಿಯೂ ರವೀಂದ್ರ ತಾನಾಡಿದ 8 ಪಂದ್ಯಗಳಲ್ಲಿ 27.29ರ ಸರಾಸರಿಯಲ್ಲಿ, 128.19ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 191 ರನ್ ಗಳಿಸಿದ್ದಾರೆ. ಕೇವಲ ಒಂದು ಅರ್ಧಶತಕ (ಔಟಾಗದೆ 65)ಗಳಿಸಿದ್ದಾರೆ.

ಮಧ್ಯಮ ಸರದಿ:

ಇಶಾನ್ ಕಿಶನ್, ರಿಷಭ್ ಪಂತ್(ನಾಯಕ, ವಿಕೆಟ್‌ಕೀಪರ್), ವೆಂಕಟೇಶ್ ಅಯ್ಯರ್

ಈ ಮೂವರು ಎಡಗೈ ಬ್ಯಾಟರ್‌ಗಳಾಗಿದ್ದು, ಪ್ರಾಬಲ್ಯ ಸಾಧಿಸುವ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.

► ಇಶಾನ್ ಕಿಶನ್(11.25 ಕೋ.ರೂ.): ಟೂರ್ನಿಯ ಮೊದಲ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದ ಕಿಶನ್ ಆನಂತರ ಸಂಪೂರ್ಣ ವಿಫಲರಾದರು. 11 ಇನಿಂಗ್ಸ್‌ಗಳಲ್ಲಿ 24.50ರ ಸರಾಸರಿಯಲ್ಲಿ 144.12ರ ಸ್ಟ್ರೈಕ್‌ರೇಟ್‌ನಲ್ಲಿ 196 ರನ್ ಗಳಿಸಿದ್ದಾರೆ.

► ರಿಷಭ್ ಪಂತ್(27 ಕೋ.ರೂ.): ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದ ರಿಷಭ್ ಪಂತ್ ತನ್ನ ಮೌಲ್ಯಕ್ಕೆ ತಕ್ಕಂತೆ ಆಡದೆ ಭಾರೀ ನಿರಾಸೆಗೊಳಿಸಿದರು. 11 ಪಂದ್ಯಗಳಲ್ಲಿ 12.80ರ ಸರಾಸರಿಯಲ್ಲಿ 100ಕ್ಕಿಂತ ಕಡಿಮೆ ಸ್ಟ್ರೈಕ್‌ರೇಟ್‌ನಲ್ಲಿ(99.22)ಕೇವಲ 128 ರನ್ ಗಳಿಸಿದ್ದಾರೆ.

► ವೆಂಕಟೇಶ್ ಅಯ್ಯರ್(23.75 ಕೋ.ರೂ.)ಏಕೈಕ ಅರ್ಧಶತಕ ಗಳಿಸಿರುವ ಅಯ್ಯರ್ ಸ್ಥಿರ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿದ್ದಾರೆ. 11 ಪಂದ್ಯಗಳಲ್ಲಿ 20.29ರ ಸರಾಸರಿಯಲ್ಲಿ 139.22ರ ಸ್ಟ್ರೈಕ್‌ರೇಟ್‌ನಲ್ಲಿ 142 ರನ್ ಗಳಿಸಿದ್ದು, ಫ್ರಾಂಚೈಸಿಯು ತನಗೆ ನೀಡಿರುವ ಭಾರೀ ಮೊತ್ತಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ.

ಕೆಳ ಸರದಿ:

ಗ್ಲೆನ್ ಮ್ಯಾಕ್ಸ್‌ವೆಲ್,ಲಿಯಾಮ್ ಲಿವಿಂಗ್‌ಸ್ಟೋನ್, ದೀಪಕ್ ಹೂಡಾ.

ವಿದೇಶಿ ಸ್ಟಾರ್‌ಗಳು ಹಾಗೂ ಅನುಭವಿ ಭಾರತೀಯ ಆಟಗಾರರು ಅರ್ಥಪೂರ್ಣ ಕೊಡುಗೆ ನೀಡುವಲ್ಲಿ ವಿಫಲರಾಗಿದ್ದಾರೆ.

► ಗ್ಲೆನ್ ಮ್ಯಾಕ್ಸ್‌ವೆಲ್(4.2 ಕೋ.ರೂ.): ಮ್ಯಾಕ್ಸ್‌ವೆಲ್ ತನ್ನ ಐಪಿಎಲ್ ವೃತ್ತಿಜೀವನದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. 7 ಇನಿಂಗ್ಸ್‌ಗಳಲ್ಲಿ 8ರ ಸರಾಸರಿಯಲ್ಲಿ 97.96ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 48 ರನ್ ಗಳಿಸಿದ್ದಾರೆ. 8.46ರ ಇಕಾನಮಿ ರೇಟ್‌ನಲ್ಲಿ ಕೇವಲ 4 ವಿಕೆಟ್‌ಗಳನ್ನು ಪಡೆದಿದ್ದಾರೆ.

► ಲಿಯಾಮ್ ಲಿವಿಂಗ್‌ಸ್ಟೋನ್(8.75 ಕೋ.ರೂ.): ಇಂಗ್ಲೆಂಡ್‌ನ ಆಲ್‌ರೌಂಡರ್ 7 ಪಂದ್ಯಗಳಲ್ಲಿ 17.40ರ ಸರಾಸರಿಯಲ್ಲಿ, 127.94ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 87 ರನ್ ಗಳಿಸಿದ್ದಾರೆ. ಕೇವಲ 2 ವಿಕೆಟ್‌ಗಳನ್ನು ಪಡೆದಿದ್ದಾರೆ.

► ದೀಪಕ್ ಹೂಡಾ(1.7 ಕೋ.ರೂ.): ಈ ಋತುವಿನಲ್ಲಿ ಸಂಪೂರ್ಣ ನಿರಾಸೆಗೊಳಿಸಿರುವ ಹೂಡಾ 6 ಪಂದ್ಯಗಳಲ್ಲಿ 6.20ರ ಸರಾಸರಿಯಲ್ಲಿ 75.6ರ ಸ್ಟ್ರೈಕ್‌ರೇಟ್‌ನಲ್ಲಿ 31 ರನ್ ಗಳಿಸಿದ್ದಾರೆ.

ಬೌಲರ್‌ಗಳು:

ರವಿಚಂದ್ರನ್ ಅಶ್ವಿನ್, ತುಷಾರ್ ದೇಶಪಾಂಡೆ, ಮುಹಮ್ಮದ್ ಶಮಿ

► ಆರ್.ಅಶ್ವಿನ್(9.75 ಕೋ.ರೂ.): ತವರು ತಂಡ ಚೆನ್ನೈ ಸೂಪರ್ ಕಿಂಗ್ಸ್‌ಗೆ ಅಶ್ವಿನ್‌ರ ಬಹುನಿರೀಕ್ಷಿತ ಪುನರಾಗಮನವು ಯೋಜನೆಯಂತೆ ನಡೆಯಲಿಲ್ಲ. ಅಶ್ವಿನ್ 10 ಪಂದ್ಯಗಳಲ್ಲಿ 44.60ರ ಸರಾಸರಿಯಲ್ಲಿ 9.29ರ ಇಕಾನಮಿ ರೇಟ್‌ನಲ್ಲಿ ಕೇವಲ 5 ವಿಕೆಟ್‌ಗಳನ್ನು ಪಡೆದಿದ್ದಾರೆ.

► ತುಷಾರ್ ದೇಶಪಾಂಡೆ(6.5 ಕೋ.ರೂ.): ಸ್ಥಿರ ಪ್ರದರ್ಶನ ನೀಡಿ ಹಿಡಿತ ಸಾಧಿಸುವಲ್ಲಿ ಪರದಾಟ ನಡೆಸಿರುವ ತುಷಾರ್ 45ರ ಸರಾಸರಿಯಲ್ಲಿ, ಕೇವಲ 11.25ರ ಇಕಾನಮಿ ರೇಟ್‌ನಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

► ಮುಹಮ್ಮದ್ ಶಮಿ(10 ಕೋ.ರೂ.): ಕಳಪೆ ಪ್ರದರ್ಶನ ನೀಡಿ ಅಚ್ಚರಿಗೊಳಿಸಿರುವ ಹಿರಿಯ ವೇಗಿ ಶಮಿ ಪಂದ್ಯಾವಳಿಯಲ್ಲಿ 56.17ರ ಸರಾಸರಿಯಲ್ಲಿ 11.23ರ ಇಕಾನಮಿ ರೇಟ್‌ನಲ್ಲಿ ಕೇವಲ 6 ವಿಕೆಟ್‌ಗಳನ್ನು ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News