ಏಕದಿನ ತಂಡದ ನಾಯಕನಾಗಿ ಗಿಲ್ ನೇಮಕಕ್ಕೆ ಕ್ಷಣಗಣನೆ?
Photo - BCCI/Sportzpics
ಮುಂಬೈ, ಸೆ. 7: ಭಾರತದ ಅಂತರ್ರಾಷ್ಟ್ರೀಯ ಟಿ20 ತಂಡದ ಉಪನಾಯಕನಾಗಿ ಶುಭಮನ್ ಗಿಲ್ ರನ್ನು ನೇಮಿಸಿದಂದಿನಿಂದ, ಅವರನ್ನು ಏಕದಿನ ತಂಡದ ನಾಯಕನಾಗಿ ನೇಮಿಸಲಾಗುತ್ತದೆ ಎಂಬ ಮಾತುಗಳು ಕ್ರಿಕೆಟಿಂಗ್ ವಲಯದಲ್ಲಿ ಚಾಲ್ತಿಯಲ್ಲಿದ್ದವು. ಅಂತರ್ರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾರ ದೀರ್ಘಾವಧಿ ಭವಿಷ್ಯದ ಬಗ್ಗೆ ಸಂದೇಹಗಳು ಹೆಚ್ಚುತ್ತಿರುವಂತೆಯೇ, ಮುಂಬರುವ ಆಸ್ಟ್ರೇಲಿಯದ ಸೀಮಿತ ಓವರ್ಗಳ ಪ್ರವಾಸವು ಅವರ ಕೊನೆಯ ಪ್ರವಾಸವಾಗಬಹುದು ಎಂಬುದಾಗಿ ಹೇಳಲಾಗುತ್ತಿದೆ. ಬ್ಯಾಟರ್ ಆಗಿ ಅಲ್ಲದಿದ್ದರೂ ನಾಯಕನಾಗಿ ಅವರ ಕೊನೆಯ ಪ್ರವಾಸವಾಗಿರುವ ಸಾಧ್ಯತೆಯಿದೆ.
2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಆಯ್ಕೆ ಸಮಿತಿಯು, ಈ ಪಂದ್ಯಾವಳಿಗೆ ಮುನ್ನ ಹೊಂದಿಕೊಳ್ಳಲು ಮತ್ತು ನೆಲೆಯೂರಲು ಏಕದಿನ ಕ್ರಿಕೆಟ್ ತಂಡದ ನೂತನ ನಾಯಕನಿಗೆ ಸಮಯಾವಕಾಶ ನೀಡಲು ಬಯಸಿರುವಂತೆ ಕಾಣುತ್ತಿದೆ.
ಗಿಲ್ ರನ್ನು ಭಾರತೀಯ ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ನೇಮಿಸುವುದಕ್ಕೆ ಸಂಬಂಧಿಸಿ ಯಾವುದೇ ಸಂದೇಹವಿಲ್ಲ, ಯಾವಾಗ ಅಧಿಕೃತ ಘೋಷಣೆಯನ್ನು ಮಾಡಲಾಗುತ್ತದೆ ಎನ್ನುವುದು ಮಾತ್ರ ಈಗಿನ ಕುತೂಹಲ ಎಂಬುದಾಗಿ ‘ರೆವ್ಸ್ಪೋರ್ಟ್ಸ್’ನಲ್ಲಿ ಪ್ರಕಟಗೊಂಡಿರುವ ವರದಿಯೊಂದು ತಿಳಿಸಿದೆ.
ಕ್ರಿಕೆಟ್ ನ 50 ಓವರ್ಗಳ ಮಾದರಿಯಲ್ಲಿ ಆಡುವುದನ್ನು ಮುಂದುವರಿಸಲು ಮತ್ತು ಇನ್ನೆರಡು ವರ್ಷಗಳಲ್ಲಿ ಬರುವ ಏಕದಿನ ವಿಶ್ವಕಪ್ ನಲ್ಲಿ ಇನ್ನೊಮ್ಮೆ ಗೆಲ್ಲಲು ಹಾಲಿ ನಾಯಕ ರೋಹಿತ್ ಶರ್ಮಾ ಬಯಸಿದ್ದಾರೆ ಎಂಬುದಾಗಿ ಈಗಾಗಲೇ ವರದಿಯಾಗಿದೆ. ಆದರೆ, ಈ ನಿರ್ಧಾರವು ಸಂಪೂರ್ಣವಾಗಿ ಅವರ ಕೈಯಲ್ಲಿ ಇಲ್ಲ.
ಏನಿದ್ದರೂ, ಮುಂಬರುವ ಆಸ್ಟ್ರೇಲಿಯ ಪ್ರವಾಸದ ವೇಳೆ ಅವರು ನೀಡುವ ನಿರ್ವಹಣೆಯೇ ಮುಖ್ಯವಾಗುತ್ತದೆ.