ಯುಎಸ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಇತಿಹಾಸ ನಿರ್ಮಿಸಿದ ಭಾರತ; ಫೈನಲ್ ಗೆ ಆಯುಶ್ ಶೆಟ್ಟಿ, ತನ್ವಿ ಶರ್ಮಾ
ತನ್ವಿ ಶರ್ಮಾ - Photo Credit: BWF website
ಕೌನ್ಸಿಲ್ ಬ್ಲಫ್ಸ್ (ಅಮೆರಿಕ): ಅಮೆರಿಕದ ಅಯೋವ ರಾಜ್ಯದ ಕೌನ್ಸಿಲ್ ಬ್ಲಫ್ಸ್ನಲ್ಲಿ ನಡೆಯುತ್ತಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಶನಿವಾರ ರಾತ್ರಿ ಭಾರತ ಇತಿಹಾಸ ನಿರ್ಮಿಸಿದೆ. ಭಾರತದ ಯುವ ಆಟಗಾರರಾದ ಆಯುಶ್ ಶೆಟ್ಟಿ ಮತ್ತು ತನ್ವಿ ಶರ್ಮಾ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗಗಳಲ್ಲಿ ಫೈನಲ್ ತಲುಪಿದ್ದಾರೆ.
ಪುರುಷರ ಸೆಮಿಫೈನಲ್ ನಲ್ಲಿ, 20 ವರ್ಷದ ಆಯುಶ್ ಅಮೋಘ ಪ್ರತಿ ಹೋರಾಟವನ್ನು ನೀಡಿ ಒಂಭತ್ತನೇ ವಿಶ್ವ ರ‍್ಯಾಂಕಿಂಗ್ ಹಾಗೂ ಅಗ್ರ ಶ್ರೇಯಾಂಕದ ಆಟಗಾರ ತೈವಾನ್ನ ಟಿಯನ್ ಚೆನ್ ರನ್ನು ಸೋಲಿಸಿದರು. ಇದು ಅವರ ಚೊಚ್ಚಲ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ ಆಗಿದೆ.
ಆರಂಭಿಕ ಗೇಮನ್ನು ಕಳೆದುಕೊಂಡ ಆಯುಶ್ ಜಿದ್ದಾಜಿದ್ದಿನ ಪಂದ್ಯದಲ್ಲಿ ತನ್ನ ಎದುರಾಳಿಯನ್ನು 21-23, 21-15, 21-14 ಗೇಮ್ಗಳಿಂದ ಪರಾಭವಗೊಳಿಸಿದರು. ಪಂದ್ಯವು 67 ನಿಮಿಷಗಳ ಕಾಲ ಸಾಗಿತು.
ಆಯುಶ್ ಫೈನಲ್ ನಲ್ಲಿ ಮೂರನೇ ಶ್ರೇಯಾಂಕದ ಕೆನಡದ ಬ್ರಯಾನ್ ಯಾಂಗ್ ರನ್ನು ಎದುರಿಸಲಿದ್ದಾರೆ.
ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ನಲ್ಲಿ, ಹದಿನಾರು ವರ್ಷದ ತನ್ವಿ ಶರ್ಮಾ, ಏಳನೇ ಶ್ರೇಯಾಂಕದ ಉಕ್ರೇನಿನ ಪೊಲಿನಾ ಬುಹ್ರೋವರನ್ನು ಮಣಿಸಿದರು. ಈ ಮೂಲಕ, ವರ್ಲ್ಡ್ ಟೂರ್ ಫೈನಲ್ ತಲುಪಿದ ಅತಿ ಕಿರಿಯ ಭಾರತೀಯ ಸ್ಪರ್ಧಿಯಾದರು.
66ನೇ ವಿಶ್ವ ರ‍್ಯಾಂಕಿಂಗ್ ನ ತನ್ವಿ ತನ್ನ ಏಳನೇ ಶ್ರೇಯಾಂಕದ ಎದುರಾಳಿಯನ್ನು 21-14, 21-16 ಗೇಮ್ ಗಳಿಂದ ಸೋಲಿಸಿ ಫೈನಲ್ ತಲುಪಿದರು.
ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ (ಬಿಎಐ)ನ ಗುವಾಹಟಿಯಲ್ಲಿರುವ ನ್ಯಾಶನಲ್ ಸೆಂಟರ್ ಆಫ್ ಎಕ್ಸಲೆನ್ಸ್ (ಎನ್ಸಿಇ)ನ ಉತ್ಪನ್ನವಾಗಿರುವ ತನ್ವಿ, ಫೈನಲ್ವರೆಗಿನ ತನ್ನ ಹಾದಿಯಲ್ಲಿ ಎರಡನೇ ಶ್ರೇಯಾಂಕದ ತುಯ್ ಲಿನ್ ನಗುಯೆನ್ ಮತ್ತು ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ಪಿಚಮೊನ್ ಒಪಾಟ್ನಿಪುತ್ ಸೇರಿದಂತೆ ತನಗಿಂತ ಹೆಚ್ಚಿನ ರ‍್ಯಾಂಕಿಂಗ್ ನ ಹಲವಾರು ಸ್ಪರ್ಧಿಗಳನ್ನು ಸೋಲಿಸಿದ್ದಾರೆ.
ತನ್ವಿ ಫೈನಲ್ ನಲ್ಲಿ ಅಗ್ರ ಶ್ರೇಯಾಂಕದ ಅಮೆರಿಕದ ಬೇವನ್ ಝಾಂಗ್ರನ್ನು ಎದುರಿಸಲಿದ್ದಾರೆ.