×
Ad

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 2ನೇ ಗರಿಷ್ಠ ರನ್ ಗಳಿಕೆದಾರನಾದ ವಿರಾಟ್ ಕೊಹ್ಲಿ

Update: 2025-10-25 20:26 IST

ವಿರಾಟ್ ಕೊಹ್ಲಿ | Photo Credit : PTI

ಸಿಡ್ನಿ,ಅ.25: ರೋಹಿತ್ ಶರ್ಮಾ(ಔಟಾಗದೆ 121, 125 ಎಸೆತ) ಹಾಗೂ ವಿರಾಟ್ ಕೊಹ್ಲಿ (ಔಟಾಗದೆ 74, 81 ಎಸೆತ) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾವು ಆಸ್ಟ್ರೇಲಿಯ ತಂಡವನ್ನು 9 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಮಣಿಸಿದೆ. ಇದರೊಂದಿಗೆ ಸರಣಿ ಕ್ಲೀನ್‌ಸ್ವೀಪ್‌ನಿಂದ ಪಾರಾಗಿದೆ.

ಪರ್ತ್ ಹಾಗೂ ಅಡಿಲೇಡ್‌ನಲ್ಲಿ ನಡೆದ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯ ಈಗಾಗಲೆ ಸರಣಿ ವಶಪಡಿಸಿಕೊಂಡಿದ್ದು, ಶನಿವಾರದ ಪಂದ್ಯ ರೋಹಿತ್-ಕೊಹ್ಲಿ ಅವರ ಸ್ಮರಣೀಯ ಮೈಲಿಗಲ್ಲಿಗೆ ಸಾಕ್ಷಿಯಾಯಿತು. ಔಟಾಗದೆ 121 ರನ್ ಗಳಿಸಿದ ರೋಹಿತ್ ತನ್ನ 50ನೇ ಅಂತರ್‌ರಾಷ್ಟ್ರೀಯ ಶತಕ ಗಳಿಸಿದರು. ಕೊಹ್ಲಿ ಔಟಾಗದೆ 74 ರನ್ ಕಲೆ ಹಾಕಿದರು.

ಭಾರತವು ಮೊದಲ 10 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿತು. ನಾಯಕ ಗಿಲ್(24 ರನ್) ಔಟಾದ ನಂತರ 2ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 168 ರನ್ ಸೇರಿಸಿದ ರೋಹಿತ್-ಕೊಹ್ಲಿ ಭಾರತವು 38.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 237 ರನ್ ಗಳಿಸುವಲ್ಲಿ ನೆರವಾದರು. ಆಸ್ಟ್ರೇಲಿಯದಲ್ಲಿ ಬಹುಶಃ ಕೊನೆಯ ಪಂದ್ಯವನ್ನಾಡಿದ ಭಾರತದ ಇಬ್ಬರು ದಿಗ್ಗಜ ಕ್ರಿಕೆಟಿಗರ ಸೊಗಸಾದ ಬ್ಯಾಟಿಂಗನ್ನು ಕ್ರಿಕೆಟ್ ಅಭಿಮಾನಿಗಳು ಕಣ್ತುಂಬಿಕೊಂಡರು.

ರೋಹಿತ್ ದಾಖಲೆಯ ಶತಕ: ರೋಹಿತ್ ಕೇವಲ 105 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಾಯದಿಂದ ತನ್ನ 33ನೇ ಏಕದಿನ ಶತಕ ಪೂರೈಸಿದರು. ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲಿ ತನ್ನ 50ನೇ ಶತಕ(ಟೆಸ್ಟ್-12, ಏಕದಿನ-33, ಟಿ20-5)ಗಳಿಸಿದರು. ರೋಹಿತ್ ಇನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್‌ಗಳಿದ್ದವು. ಆಸ್ಟ್ರೇಲಿಯದ ವಿರುದ್ಧ 6ನೇ ಶತಕ ಸಿಡಿಸಿದ ರೋಹಿತ್ ಅವರು ಕೊಹ್ಲಿ ದಾಖಲೆಯನ್ನು ಮುರಿದು, ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದರು. ಸರಣಿಯಲ್ಲಿ ಒಟ್ಟು 202 ರನ್ ಗಳಿಸಿದ ರೋಹಿತ್, ಸರಣಿಶ್ರೇಷ್ಠ ಹಾಗೂ ಪಂದ್ಯಶ್ರೇಷ್ಠ ಎರಡೂ ಪ್ರಶಸ್ತಿಗಳಿಗೆ ಭಾಜನರಾದರು.

ವಿರಾಟ್ ಕೊಹ್ಲಿ 75ನೇ ಅರ್ಧಶತಕ: ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಶೂನ್ಯ ಸಂಪಾದಿಸಿ ನಿರಾಶೆಗೊಳಿಸಿದ್ದ ಕೊಹ್ಲಿ 3ನೇ ಪಂದ್ಯದಲ್ಲಿ ಔಟಾಗದೆ 74 ರನ್ ಗಳಿಸಿದರು. ಈ ಮೂಲಕ ತನ್ನ 75ನೇ ಅರ್ಧಶತಕ ದಾಖಲಿಸಿದರು. ಕೊಹ್ಲಿ ಶಾಂತಚಿತ್ತದಿಂದ ಬ್ಯಾಟ್ ಬೀಸಿದರೆ, ರೋಹಿತ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು. ಕೊಹ್ಲಿ-ರೋಹಿತ್ ಇನ್ನೂ 69 ಎಸೆತಗಳು ಬಾಕಿ ಇರುವಾಗಲೇ ಭಾರತಕ್ಕೆ ಗೆಲುವು ತಂದುಕೊಟ್ಟರು.

ಹರ್ಷಿತ್ ರಾಣಾ ಜೀವನಶ್ರೇಷ್ಠ ಬೌಲಿಂಗ್: ವೇಗಿ ಹರ್ಷಿತ್ ರಾಣಾ ಜೀವನಶ್ರೇಷ್ಠ ಬೌಲಿಂಗ್(4-39)ಸಹಾಯದಿಂದ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡವನ್ನು ಭಾರತವು 46.4 ಓವರ್‌ಗಳಲ್ಲಿ 236 ರನ್‌ಗೆ ನಿಯಂತ್ರಿಸಿತು. ಅಕ್ಷರ್ ಪಟೇಲ್(1-18) ಹಾಗೂ ವಾಶಿಂಗ್ಟನ್ ಸುಂದರ್(2-44) ಮಧ್ಯಮ ಓವರ್‌ಗಳಲ್ಲಿ ಸ್ಪಿನ್ ಬೌಲಿಂಗ್‌ನಿಂದ ರನ್‌ಗೆ ಕಡಿವಾಣ ಹಾಕಿದರು. ಮುಹಮ್ಮದ್ ಸಿರಾಜ್(1-24) ಹಾಗೂ ಪ್ರಸಿದ್ಧ ಕೃಷ್ಣ (1-52)ತಲಾ 1 ವಿಕೆಟ್ ಪಡೆದರು.

ಮಿಚೆಲ್ ಮಾರ್ಷ್(41 ರನ್)ಹಾಗೂ ಟ್ರಾವಿಸ್ ಹೆಡ್(29 ರನ್)ಮೊದಲ ವಿಕೆಟ್‌ಗೆ 61 ರನ್ ಸೇರಿಸಿ ಆಸ್ಟ್ರೇಲಿಯಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆದರೆ ಆಸ್ಟ್ರೇಲಿಯವು ಕೇವಲ 53 ಎಸೆತಗಳಲ್ಲಿ ಕೊನೆಯ 7 ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಮ್ಯಾಟ್ ರೆನ್‌ಶಾ(56 ರನ್, 58 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಮ್ಯಾಥ್ಯೂ ಶಾರ್ಟ್ 30 ರನ್ ಕಲೆಹಾಕಿದರು.

ಇಂದಿನ ಪಂದ್ಯದಲ್ಲಿ ಭಾರತದ ಫೀಲ್ಡರ್‌ಗಳು ಉತ್ತಮ ಪ್ರದರ್ಶನದಿಂದ ಗಮನ ಸೆಳೆದರು. ಕೊಹ್ಲಿ ಅವರು ಅಮೋಘ ಕ್ಯಾಚ್ ಮೂಲಕ ಮ್ಯಾಥ್ಯೂ ಶಾರ್ಟ್‌ರನ್ನು ಔಟ್ ಮಾಡಿದರು. ಶ್ರೇಯಸ್ ಅಯ್ಯರ್ ರನ್ನಿಂಗ್, ಡೈವಿಂಗ್ ಕ್ಯಾಚ್ ಮೂಲಕ ಅಲೆಕ್ಸ್ ಕ್ಯಾರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಈ ವೇಳೆ ಅವರು ಗಾಯಗೊಂಡಿದ್ದಾರೆ.

*ಆಸ್ಟ್ರೇಲಿಯದಲ್ಲಿ ಸ್ಮರಣೀಯ ವಿದಾಯ ಪಂದ್ಯ: 2027ರ ವಿಶ್ವಕಪ್‌ಗಿಂತ ಮೊದಲು ಆಸ್ಟ್ರೇಲಿಯದಲ್ಲಿ ಯಾವುದೇ ಏಕದಿನ ಸರಣಿ ನಿಗದಿಯಾಗಿಲ್ಲ. ಹೀಗಾಗಿ ಹಿರಿಯ ಆಟಗಾರರಾದ ರೋಹಿತ್ ಹಾಗೂ ಕೊಹ್ಲಿ ಪಾಲಿಗೆ ಇದು ವಿದಾಯದ ಪಂದ್ಯವಾಗಿದೆ. ಸಿಡ್ನಿ ಪ್ರೇಕ್ಷಕರಿಂದ ಭಾರೀ ಬೆಂಬಲ ಸ್ವಾಗತ ಸ್ವೀಕರಿಸಿದ ರೋಹಿತ್ ಹಾಗೂ ಕೊಹ್ಲಿ ಶತಕದ ಜೊತೆಯಾಟದಿಂದ ಅಭಿಮಾನಿಗಳನ್ನು ರಂಜಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News