ಸಚಿನ್ ದಾಖಲೆ ಮೀರಿಸಲು ಕೊಹ್ಲಿಗೆ ಎಷ್ಟು ವರ್ಷ ಬೇಕು ಗೊತ್ತೇ?
ವಿರಾಟ್ ಕೊಹ್ಲಿ | Photo Credit : PTI
ಮುಂಬೈ: ಭಾರತ ಏಕದಿನ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಇದೀಗ 84 ಶತಕಗಳ ಒಡೆಯ. ಏಕದಿನ ಪಂದ್ಯಗಳಲ್ಲಿ 53, ಟೆಸ್ಟ್ ನಲ್ಲಿ 30 ಹಾಗೂ ಟಿ20ಯಲ್ಲಿ ಒಂದು ಶತಕ ದಾಖಲಿಸಿರುವ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ದಾಖಲೆಗಿಂತ ಇನ್ನೂ 16 ಶತಕದಷ್ಟು ಹಿಂದಿದ್ದಾರೆ. ಮೇಲ್ನೋಟಕ್ಕೆ ಇದು ದೊಡ್ಡ ಅಂತರವೇನಲ್ಲ. ಆದರೆ ವಾಸ್ತವ ಪ್ರಶ್ನೆ ಎಂದರೆ 37ನೇ ವಯಸ್ಸಿನಲ್ಲಿ ಅದರಲ್ಲೂ ಮುಖ್ಯವಾಗಿ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‍ನಿಂದ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಕೇವಲ ಏಕದಿನ ಪಂದ್ಯಗಳಲ್ಲಿ ಸಚಿನ್ ದಾಖಲೆಯ ಸನಿಹಕ್ಕೆ ಬರಬೇಕಿದ್ದರೆ ಕೊಹ್ಲಿಗೆ ಇನ್ನೂ ಎಷ್ಟು ವರ್ಷ ಬೇಕು ಎನ್ನುವುದು.
ಕೊಹ್ಲಿ 27 ಸಾವಿರ ಅಂತರರಾಷ್ಟ್ರೀಯ ರನ್ ಕಲೆ ಹಾಕಿದ್ದು, ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ಏಕದಿನ ಪಂದ್ಯಗಳ 296 ಇನ್ನಿಂಗ್ಸ್ ಗಳಿಂದ 53 ಶತಕ ಸಹಿತ 58.70 ಸರಾಸರಿಯಲ್ಲಿ 14,557 ರನ್ ಗಳಿಸಿರುವ ಕೊಹ್ಲಿ, ಪ್ರತಿ 5.6 ಏಕದಿನ ಪಂದ್ಯಗಳಲ್ಲಿ ಒಂದು ಶತಕ ಸಾಧಿಸಿದ್ದಾರೆ. ಸಚಿನ್ ದಾಖಲೆ ಸರಿಗಟ್ಟಲು 16 ಶತಕ ಗಳಿಸಬೇಕಿರುವ ಅವರು, ಇದನ್ನು ತಲುಪಲು ಎಷ್ಟು ಪಂದ್ಯ ಆಡಬೇಕು ಹಾಗೂ ಎಷ್ಟು ನಿಯತವಾಗಿ ಶತಕ ಗಳಿಸಬೇಕು ಎನ್ನುವುದು ಎಲ್ಲರ ಕುತೂಹಲ.
2027ರ ವಿಶ್ವಕಪ್ ವರೆಗೂ ಭಾರತ ಏಕದಿನ ಪಂದ್ಯಗಳನ್ನು ಹೆಚ್ಚಾಗಿ ಆಡಲಿದ್ದು, ಹಲವು ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿಗಳಿವೆ. ಜತೆಗೆ ವಿಶ್ವಕಪ್ ಕೂಡ ಇದೆ. ಟೂರ್ನಿಯವರೆಗೆ ಸುಮಾರು 30 ಪಂದ್ಯಗಳನ್ನು ಭಾರತ ಆಡಲಿದೆ. 30-32 ಪಂದ್ಯಗಳನ್ನು ಕೊಹ್ಲಿ ಆಡುತ್ತಾರೆ ಅಂದುಕೊಂಡರೂ, ಪ್ರಸ್ತುತ ಅವರು ಶತಕ ಗಳಿಸಿದ ದರದಲ್ಲಿ ಮುಂದೆಯೂ ಅದೇ ಸಾಮಥ್ರ್ಯ ಸಾಬೀತುಪಡಿಸಿದರೆ 5.6 ಪಂದ್ಯಗಳಿಗೆ ಒಂದರಂತೆ 4-5 ಶತಕ ಗಳಿಸಬಹುದು. ಅಂದರೆ 88-89 ಶತಕಗಳೊಂದಿಗೆ ವೃತ್ತಿಗೆ ವಿದಾಯ ಹೇಳಬೇಕಾಗುತ್ತದೆ.
ಎಷ್ಟೇ ಅತ್ಯುತ್ತಮ ಸಾಮಥ್ರ್ಯ ಪ್ರದರ್ಶಿಸಿದರೂ, 90-92 ಶತಕಗಳನ್ನಷ್ಟೇ ಗಳಿಸಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಸಚಿನ್ ದಾಖಲೆ ಸರಿಗಟ್ಟಲು ಮತ್ತೆ 8-10 ಶತಕ ಬೇಕಾಗಬಹುದು. ಆ ವೇಳೆಗೆ ಕೊಹ್ಲಿ ವಯಸ್ಸು 40 ದಾಟಿರುತ್ತದೆ. ಇದೇ ದರದಲ್ಲಿ ಶತಕ ಗಳಿಸುತ್ತಾ ಸಾಗಿದರೂ ಮತ್ತೆ 50-55 ಪಂದ್ಯಗಳನ್ನು ಆಡಬೇಕಾಗುತ್ತದೆ. ಅಂದರೆ ಮತ್ತೆ 6-7 ವರ್ಷ ಏಕದಿನ ಪಂದ್ಯಗಳನ್ನು ಆಡಬೇಕಾಗುತ್ತದೆ.